

ಹೊಳೆನರಸೀಪುರ : ಅನಾದಿ ಕಾಲದಿಂದಲೂ ಮಹಿಳೆಯರ ಮೇಲೆ ನಡೆಯುತ್ತಿರುವ ವಿವಿಧ ರೀತಿಯ ದೌರ್ಜನ್ಯಗಳಿಗೆ ಇತಿಶ್ರೀ ಹಾಡಬೇಕು ಎಂದು ನಿವೃತ್ತ ಶಿಕ್ಷಕಿ ರಮಾಮಣಿ ತಿಳಿಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳೆಯರ ದೌರ್ಜನ್ಯ ವಿರೋಧಿ ಸಮಿತಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಭ್ರೂಣ ಹತ್ಯೆಯಿಂದಾಗಿ ಮಹಿಳೆಯರ ಸಂಖ್ಯೆ ಕಡಿಮೆ ಆಗಿದೆ. ರೈತರಿಗೆ, ಅರ್ಚಕರಿಗೆ, ಅಡುಗೆ ಕೆಲಸ ಮಾಡುವವರಿಗೆ, ಸರ್ಕಾರಿ ಹಾಗೂ ಮಧ್ಯಮ ಸಂಪಾದನೆಯ ಉದ್ಯೋಗದವರಿಗೆ ಹೆಣ್ಣು ಕೊಡುವರರೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಗೆ ಭ್ರೂಣಗಳನ್ನು ಹತ್ಯೆ ಮಾಡಿಸಿಕೊಂಡ ಹೆಂಗಸರು ಹಾಗೂ ಅದಕ್ಕೆ ಪ್ರೋತ್ಸಾಹ ನೀಡಿದವರೆಲ್ಲರೂ ಕಾರಣ ಎಂದರು. ಹೆಣ್ಣು ರಾಣಿ ಆಗಿದ್ದರೂ ಅವಳಿಗೂ ಹೆಣ್ಣಿನ ಅನೇಕ ಕಟ್ಟುಪಾಡುಗಳಿರುತ್ತದೆ. ಅದನ್ನೆಲ್ಲಾ ಅವರು ನಗುನಗುತ್ತಾ ನಿಭಾಯಿಸುತ್ತಲೇ ಇರುತ್ತಾರೆ. ಹೆಣ್ಣಿನ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ ಎಂದರು.
ಹೆಣ್ಣಿನ ಮಾನ -ಪ್ರಾಣ ರಕ್ಷಣೆಗೆ ಅನೇಕ ಕಾನೂನುಗಳಿವೆ. ಶೋಷಣೆಗೆ ಒಳಗಾದ ಮಹಿಳೆ ನ್ಯಾಯ ಪಡೆದುಕೊಳ್ಳುವ ವೇಳೆಗೆ ಹೈರಾಣಾಗುತ್ತಾಳೆ. ಇಂತಹ ಪರಿಸ್ಥಿತಿ ಬದಲಾಗಿ ಹೆಣ್ಣು ನೆಮ್ಮದಿಯಿಂದ ಜೀವಿಸುವಂತಾಬೇಕು ಎಂದರು.
ಉಪನ್ಯಾಸಕಿ ಪೂರ್ಣಿಮಾ, ಪ್ರಾಂಶುಪಾಲ ಎನ್. ಎಂ. ಲಕ್ಷ್ಮಣ್ ಅಧ್ಯಕ್ಷತೆ ವಹಿಸಿದ್ದರು. ಭೂಮಿಕಾ, ರಾಗಿಣಿ, ದಿವ್ಯಾಮಣಿ, ಅರ್ಚನಾ, ನಾಗರೇಖಾ ಇದ್ದರು.