ಮಹಿಳಾ ಕುಸ್ತಿಪಟುಗಳ ಮೇಲೆ ಅಮಾನವೀಯ ವರ್ತನೆ: ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್ ಅಸಮಾಧಾನ

mandya news (9)
Published on

ಮಂಡ್ಯ: ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ವಿಚಾರದಲ್ಲಿ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಪ್ರತಿಷ್ಠೆಯನ್ನು ಹಾಳು ಮಾಡಿದ್ದಾರೆಂದು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್ ಆರೋಪಿಸಿದರು.

ಕಳೆದ 35 ದಿನಗಳಿಂದ ಮಹಿಳಾ ಕುಸ್ತಿಪಟುಗಳು ಶಾಂತಿಯುತ ಪ್ರತಿಭಟನೆ ನಡೆಸಿದ್ದರು. ಆದರೆ, ಹೊಸ ಸಂಸತ್ ಭವನದ ಉದ್ಘಾಟನೆ ವೇಳೆ ದೌರ್ಜನ್ಯ ನಡೆಸಿ ಅಮಾನವೀಯವಾಗಿ ನಡೆದುಕೊಳ್ಳಲಾಗಿದೆ. ಇಷ್ಟಾಗಿಯೂ ಕುಸ್ತಿಪಟುಗಳ ಮನವಿಗೆ ಸ್ಪಂದಿಸದಿರುವುದು ಬೇಸರದ ವಿಷಯ. ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕೇಂದ್ರ ಸರ್ಕಾರ ಮಹಿಳಾ ಕುಸ್ತಿಪಟುಗಳ ಪ್ರಕರಣದಲ್ಲಿ ನಡೆದಿಕೊಳ್ಳುತ್ತಿರುವ ರೀತಿ ಖಂಡನೀಯ. 176 ದೇಶಗಳ ವಿಶ್ವ ಕುಸ್ತಿ ಒಕ್ಕೂಟವು ಭಾರತಕ್ಕೆ ನಿಷೇಧದ ಎಚ್ಚರಿಕೆ ನೀಡಿದೆ. ಹೆಣ್ಣು ಮಕ್ಕಳು ತಾವು ಕಷ್ಟಪಟ್ಟು ಗಳಿಸಿದ ಪದಕಗಳನ್ನು ಗಂಗಾನದಿಗೆ ಎಸೆಯುವ ಹಂತಕ್ಕೆ ತಲುಪಿದ್ದಾರೆಂದರೆ ಅವರಿಗೆ ನ್ಯಾಯ ಕೊಡಿಸಲು ಯಾರೂ ಇಲ್ಲ ಎಂಬುದು ಸ್ಪಷ್ಟವಾಗಿದೆ. ಒಂದೆಡೆ ನ್ಯಾಯಕ್ಕಾಗಿ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದರೆ ಮತ್ತೊಂದೆಡೆ ಪ್ರಕರಣದ ಆರೋಪಿತನಿಗೆ ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಗೌರವ ಸಮರ್ಪಣೆಯಾಗಿದೆ. ಇದು ನಾಚಿಕೆಗೇಡಿನ ಸಂಗತಿ ಎಂದು ವಿಷಾದಿಸಿದರು.

ಗೋಷ್ಠಿಯಲ್ಲಿ ಬೇಲೂರು ಗ್ರಾ.ಪಂ. ಸದಸ್ಯೆ ಸುವರ್ಣವತಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ಹೀನಾ ಕೌಸ್ಸರ್, ವೀಣಾ ಶಂಕರ್, ಜಯಮ್ಮ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net