ಮಹಿಳೆಯರ ಸಬಲೀಕರಣ, ಭದ್ರತೆಗೆ ಆದ್ಯತೆ -ವಿಜಯಾ ರಾಹತ್ಕರ್ ಹೇಳಿಕೆ

Mahila Mahajan - 1
Published on

ಬೆಂಗಳೂರು: ಮಹಿಳೆಯರ ಗೌರವ, ಸಬಲೀಕರಣ ಮತ್ತು ಭದ್ರತೆ ನಮ್ಮ ಮುಖ್ಯ ಆದ್ಯತೆಯಾಗಿದ್ದು, ಮಹಿಳೆಯರ ಅಹವಾಲುಗಳನ್ನು ವೇಗವಾಗಿ ಪರಿಹರಿಸಲು ರಾಷ್ಟ್ರೀಯ ಮಹಿಳಾ ಆಯೋಗ ಸದಾ ಬದ್ಧವಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಾಹತ್ಕರ್ ತಿಳಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೋಮವಾರ ನಗರದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ಮಹಿಳಾ ಆಯೋಗ: ಮಹಿಳಾ ಮಹಾ ಜನ್ ಸುನ್ವಾಹಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಒದಗಿಸಲು ಹಾಗೂ ಅವರ ಅಹವಾಲುಗಳಿಗೆ ನ್ಯಾಯ ದೊರಕಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ  ಮಹಿಳಾ ಜನ್ ಸುನ್ವಾಹಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ತಮ್ಮ ಸಮಸ್ಯೆಗಳ ಕುರಿತು ಮಹಿಳೆಯರು ದೆಹಲಿಯವರೆಗೆ ಬಂದು ಅಹವಾಲುಗಳನ್ನು ನೀಡಲು ಬಹಳ ಸಮಸ್ಯೆಗಳಿವೆ. ಅದನ್ನು ತಪ್ಪಿಸಲು ಆಯೋಗವೇ ಅವರ ಬಳಿಗೆ ಬರುವ ನಿರ್ಧಾರ ಕೈಗೊಂಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಯ ಮಹಿಳೆಯರಿಂದ ಬಂದಂತಹ ಅಹವಾಲುಗಳನ್ನು ಪರಿಶೀಲಿಸಿ ಸ್ಥಳದಲ್ಲಿಯೇ ಪರಿಹಾರ ದೊರಕಿಸಿಕೊಡಲಾಗುವುದು ಎಂದು ತಿಳಿಸಿದರು.

ಅನ್ಯಾಯಗಳ ಮೇಲೆ ಕ್ರಮ:

ಆಯೋಗವು ಮಹಿಳೆಯರ ಅಹವಾಲುಗಳ ಜೊತೆಗೆ ಸಮಾಜದಲ್ಲಿ ನಡೆಯುವ ಅಸಮಾನತೆ, ಅನ್ಯಾಯಗಳ ಮೇಲೂ ಸ್ವಯಂ ಕ್ರಮ (ಸೊಮೋಟೋ) ತೆಗೆದುಕೊಳ್ಳುವ ಅಧಿಕಾರ ಹೊಂದಿದೆ. ಈ ಮೂಲಕ ಸರ್ಕಾರಕ್ಕೆ ಹೊಸ ಕಾನೂನುಗಳ ಶಿಫಾರಸು, ಹಳೆಯ ಕಾನೂನುಗಳಲ್ಲಿ ತಿದ್ದುಪಡಿ ಮತ್ತು ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ನೀತಿಗಳನ್ನು ರೂಪಿಸಲು ಆಯೋಗವು ಮಹತ್ವದ ಪಾತ್ರ ವಹಿಸುತ್ತದೆ ಎಂದು ವಿಜಯಾ ಹೇಳಿದರು.

ರಾಷ್ಟ್ರಿಯ ಮಹಿಳಾ ಆಯೋಗದ ಸದಸ್ಯೆರಾದ ಅಡ್ವೊಕೇಟ್ ಡೆಲಿನಾ ಕಾಂಡು, ಮಮತಾ ಕುಮಾರಿ, ಡಾ. ಅರ್ಚನಾ ಮುಜೆಂಡಾ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಡಿಸಿಪಿ ಸಿಂಗ್ ಕೆ. ಬಾಬಾ ಇತರರು ಇದ್ದರು.

ದೇಶಾದ್ಯಂತ 18-20 ಕಾರ್ಯಕ್ರಮ

ಕಳೆದ ನಾಲ್ಕು ತಿಂಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 18ರಿಂದ 20 ಮಹಿಳಾ ಮಹಾ ಜನ್ ಸುನ್ವಾಹಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇತ್ತೀಚಿಗೆ ದೆಹಲಿಯಲ್ಲಿ ನಡೆದಿದ್ದು, 1,500ಕ್ಕೂ ಹೆಚ್ಚು ಪ್ರಕರಣಗಳನ್ನು ಪರಿಶೀಲಿಸಲಾಗಿದೆ. ಮುಂದಿನ ಕಾರ್ಯಕ್ರಮ ಉತ್ತರ ಪ್ರದೇಶದ ನೋಯ್ಡ ಮತ್ತು ಘಾಜಿಯಾಬಾದ್‌ನಲ್ಲಿ ನಡೆಯಲಿದೆ. ಇದಲ್ಲದೆ ಯುವತಿಯರು ಮತ್ತು ಮಹಿಳಾ ಜನಪ್ರತಿನಿಧಿಗಳ ಸಾಮರ್ಥ್ಯ ವೃದ್ಧಿಗಾಗಿ ಕ್ಯಾಂಪಸ್ ಕಾಲಿಂಗ್, ಚೇಂಜ್ ಮೇಕರ್ಸ್, ಪಂಚಾಯತ್ ಟು ಪಾರ್ಲಿಮೆಂಟ್ ಮುಂತಾದ ಕಾರ್ಯಕ್ರಮಗಳನ್ನೂ ಆಯೋಗದ ವತಿಯಿಂದ ನಡೆಸಲಾಗುತ್ತಿದೆ ಎಂದು ವಿಜಯಾ ರಾಹತ್ಕರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net