ಉಡುಪಿ ಶ್ರೀಕೃಷ್ಣ ಮಠಕ್ಕೆ ಮಹೇಶ್ವರಾನಂದ ಪುರಿ ಶ್ರೀ ಭೇಟಿ

Putthige Sugunendra
ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ಮಹೇಶ್ವರಾನಂದ ಪುರಿ ಸ್ವಾಮೀಜಿ ಅವರನ್ನು ಪುತ್ತಿಗೆ ಶ್ರೀಗಳು ಗೌರವಿಸಿದರು. ಅವತಾರ ಪುರಿ ಸ್ವಾಮೀಜಿ, ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರು, ಡಾ. ಕೃಷ್ಣಪ್ರಸಾದ್​, ಪ್ರಸನ್ನ ಆಚಾರ್ಯ ಇತರರಿದ್ದರು.
Published on

ಉಡುಪಿ: ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರ ಅಪೇಕ್ಷೆಯಂತೆ ಮಹೇಶ್ವರಾನಂದ ಪುರಿ ಸ್ವಾಮೀಜಿ ಹಾಗೂ ಅವರ ಶಿಷ್ಯ ಅವತಾರ ಪುರಿ ಸ್ವಾಮೀಜಿ ಶನಿವಾರ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಮಹೇಶ್ವರಾನಂದ ಶ್ರೀಗಳು ಜಗತ್ತಿನಾದ್ಯಂತ ಯೋಗ ಮತ್ತು ಸನಾತನ ಧರ್ಮ ಪ್ರಚಾರ ಮಾಡುತ್ತಿದ್ದು, ದೇಶ-ವಿದೇಶಗಳಲ್ಲಿ ಮೂರು ಸಾವಿರಕ್ಕೂ ಅಧಿಕ ಶಾಖೆ ಹೊಂದಿದ್ದಾರೆ. ಜೋಧಪುರದಲ್ಲಿ ಓಂ ಆಕಾರದ ಮಾದರಿಯಲ್ಲಿ ಅತ್ಯಾಕರ್ಷಕ ಬೃಹತ್​ ಮಂದಿರ ನಿರ್ಮಿಸಿರುವ ಹೆಗ್ಗಳಿಕೆ ಶ್ರೀಗಳದ್ದು.

ಯುರೋಪ್​ನ ವಿಯೆನ್ನಾದಲ್ಲಿ ನಡೆದ ಜಾಗತಿಕ ಶಾಂತಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತೆರಳಿದ್ದಾಗ ತಮ್ಮ ಆಶ್ರಮದಲ್ಲಿಯೇ ತಂಗಿದ್ದನ್ನು ಪುತ್ತಿಗೆ ಶ್ರೀಗಳು ಇದೇ ವೇಳೆ ಸ್ಮರಿಸಿಕೊಂಡರು. ಕೃಷ್ಣನ ದರ್ಶನದ ಬಳಿಕ ಗೀತಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಹೇಶ್ವರಾನಂದ ಸ್ವಾಮೀಜಿ ಮಾತನಾಡಿ, ಪುತ್ತಿಗೆ ಶ್ರೀಗಳ ಕೋಟಿ ಗೀತಾ ಲೇಖನ ಯಜ್ಞ ಕಾರ್ಯಕ್ರಮವನ್ನು ಶ್ಲಾಘಿಸಿದರು. ಉಭಯ ಶ್ರೀಗಳಿಬ್ಬರಿಗೂ ಮಠದ ವತಿಯಿಂದ ಶಾಲು ಹೊದೆಸಿ, ಭಗವದ್ಗೀತಾ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪುತ್ತಿಗೆ ಕಿರಿಯ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರು ಇದ್ದರು. ಶ್ರೀಮಠದ ಭಕ್ತರಾದ ಪ್ರಸಾದ್​ ನೇತ್ರಾಲಯದ ನಿರ್ದೇಶಕ, ಖ್ಯಾತ ನೇತ್ರತಜ್ಞ ಡಾ. ಕೃಷ್ಣಪ್ರಸಾದ್​ ಸ್ವಾಗತಿಸಿದರು. ಶ್ರೀಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net