

ಬೆಂಗಳೂರು: ನಗರದಲ್ಲಿ ಕಸ ಸಮಸ್ಯೆಯನ್ನು ನಿವಾರಿಸಲು ಕನ್ನಹಳ್ಳಿ, ಸೀಗೇಹಳ್ಳಿ ಹಾಗೂ ಸುಬ್ಬರಾಯನಪಾಳ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಹೊರವಲಯದಲ್ಲಿರುವ ವಿವಿಧ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಗುರುವಾರ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮದ (ಬಿಎಸ್‌ಡಬ್ಲುೃಎಂಎಲ್) ವ್ಯವಸ್ಥಾಪಕ ನಿರ್ದೇಶಕ ಅವರೊಮದಿಗೆ ಭೇಟಿ ನೀಡಿ ಅಲ್ಲಿನ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ ಅವರು ಈ ಸೂಚನೆ ನೀಡಿದರು.
ಕನ್ನಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ನಿತ್ಯ 350 ಮೆಟ್ರಿಕ್ ಟನ್ ತ್ಯಾಜ್ಯ ಸಂಸ್ಕರಣೆ ಮಾಡಲಾಗುತ್ತಿದೆ. ಈ ಘಟಕವನ್ನು ಖಾಸಗಿ ಸಂಸ್ಥೆ ಮೂಲಕ ನಿರ್ವಹಿತ್ತಿದ್ದು, ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ಸಾಧಕ-ಬಾಧಕ ಚರ್ಚಿಸಿ ಯೋಜನೆ ರೂಪಿಸಬೇಕು. ಸೀಗೇಹಳ್ಳಿ ಘಟಕದಲ್ಲಿ 120 ಮೆಟ್ರಿಕ್ ಟನ್ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯವಿದ್ದು, ಸಂಪೂರ್ಣ ತ್ಯಾಜ್ಯವನ್ನು ಸ್ವೀಕರಿಸಿ ಸಂಸ್ಕರಣೆ ಮಾಡಲಾಗುತ್ತಿದೆ. ಈ ಘಟಕದಲ್ಲಿ 5 ಲಕ್ಷ ಟನ್ ಲೆಗಸಿ ವೇಸ್ಟ್ ಇದ್ದು, ಟ್ರಾಮಲ್ ಯಂತ್ರ ಬಳಸಿಕೊಂಡು ರೀಪ್ರೊಸೆಸಿಂಗ್ ಮಾಡಬೇಕು. ಅದರಲ್ಲಿ ಆರ್‌ಡಿಎಫ್ ತ್ಯಾಜ್ಯವನ್ನು ಬಿಡದಿಯಲ್ಲಿರುವ ವಿದ್ಯುತ್ ಉತ್ಪಾದನಾ ಘಟಕಕ್ಕೆ ಕಳುಹಿಸಿ ಇನರ್ಟ್ ಅನ್ನು ಲ್ಯಾಂಡ್ಫಿಲ್ಗೆ ವಿಲೇವಾರಿ ಮಾಡುವಂತೆ ಸೂಚಿಸಿದರು.
ಘಟಕ ದುರಸ್ತಿಗೆ ಆದ್ಯತೆ ನೀಡಿರಿ:
ಸುಬ್ಬರಾಯನಪಾಳ್ಯ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ 150 ಮೆಟ್ರಿಕ್ ಟನ್ ತ್ಯಾಜ್ಯ ಸಂಸ್ಕರಣೆಗೆ ಅವಕಾಶವಿದ್ದು, ಸದ್ಯ 120 ಟನ್ ಸ್ವೀಕರಿಸಲಾಗುತ್ತಿದೆ. ಯಾವುದೇ ದುರಸ್ತಿ ಕಾರ್ಯ ಇದ್ದರೆ ಅದನ್ನು ಸರಿಪಡಿಸಿಕೊಂಡು ಪೂರ್ಣ ಪ್ರಮಾಣದಲ್ಲಿ ಘಟಕವನ್ನು ನಿರ್ವಹಿಸಬೇಕು. ಸ್ಥಳೀಯ ನಿವಾಸಿಗಳಿಗೆ ದುರ್ವಾಸನೆ ಬಾರದಂತೆ ಔಷಧಿ ಸಿಂಪಡಿಸಿ, ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.
ತಪಾಸಣೆ ವೇಳೆ ಬಿಬಿಎಂಪಿ ಮುಖ್ಯ ಅಭಿಯಂತರ ರಾಜೇಶ್, ನಿಗಮದ ಡಿಜಿಎಂ ಧಾನ್ ನಾಯ್ಕ, ಕಾರ್ಯಪಾಲಕ ಅಭಿಯಂತರ ಸೇರಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
ರಾಜಕಾಲುವೆ ಕಾಮಗಾರಿಗೆ ಜಂಟಿ ಪರಿಶೀಲನೆ:
ನಾಗರಬಾವಿಯ ಟೀಚರ್ಸ್ ಕಾಲೋನಿಯಲ್ಲಿ ಮಳೆಗಾಲದ ವೇಳೆ ಪ್ರವಾಹ ಸಮಸ್ಯೆ ಎದುರಾಗುತ್ತಿದೆ. ಆ ಸಮಸ್ಯೆ ಬಗೆಹರಿಸಲು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಆವರಣದಲ್ಲಿರುವ ಕಚ್ಛಾ ರಾಜಕಾಲುವೆಯನ್ನು ಪಕ್ಕಾ ರಾಜಕಾಲುವೆಯನ್ನಾಗಿ ಮಾಡಲು ಪಾಲಿಕೆ ಹಾಗೂ ಯೂನಿವರ್ಸಿಟಿಯ ಕುಲಪತಿಗಳೊಂದಿಗೆ ಜಂಟಿ ಪರಿಶೀಲನೆ ನಡೆಸಲಾಯಿತು. ಈ ಭಾಗದಲ್ಲಿ ತ್ವರಿತವಾಗಿ ರಾಜಕಾಲುವೆ ಕಾಮಗಾರಿ ಆರಂಭಿಸುವಂತೆ ಚೀಫ್ ಕಮಿಷನರ್ ಅವರು ಅಧಿಕಾರಿಗಳಿಗೆ ಸೂಚಿಸಲಾಯಿತು.