ಸ್ವಚ್ಛತೆ ಕಾಯ್ದುಕೊಳ್ಳಲು ಅಧಿಕಾರಿಗಳಿಗೆ ಸೂಚನೆ

Mahesh Tenginakayi New
Published on

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರದಂದು ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ, ಸ್ಮಾರ್ಟ್​ಸಿಟಿ ಮತ್ತು ಎಲ್ ಆಂಡ್ ಟಿ ನೀರು ಸರಬರಾಜು ಇಲಾಖೆಯಗಳ ಸಭೆ ನಡೆಸಿ, ಇಲಾಖಾವಾರು ಮಾಹಿತಿ ಪಡೆದುಕೊಂಡರು.

ಮಹಾನಗರ ಪಾಲಿಕೆಗೆ ಬಾಕಿ ಇರುವ ತೆರಿಗೆ ಮತ್ತು ಒತ್ತುವರಿಯಾದ ಪಾಲಿಕೆ ಆಸ್ತಿಗಳನ್ನು ಪರಿಶೀಲಿಸಿದ ಶಾಸಕ ಟೆಂಗಿನಕಾಯಿ, ಪಾಲಿಕೆಗೆ ಬರಬೇಕಾದ ಹಣ ಪಡೆಯಬೇಕು. ನಗರವನ್ನು ಸ್ವಚ್ಛವಾಗಿಡಲು ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಕ್ಷೇತ್ರ ವ್ಯಾಪ್ತಿಯ ಎಲ್ಲ ವಾರ್ಡ್​ಗಳಲ್ಲಿ ಕಸ-ವಿಲೇವಾರಿ, ನೀರು ಮತ್ತು ವಿದ್ಯುತ್ ದೀಪಗಳ ಸಮಸ್ಯೆಯನ್ನು ಈ ಕೂಡಲೇ ಬಗೆಹರಿಸಬೇಕು ಮತ್ತು ಮಳೆಗಾಲ ಬರುವುದರಿಂದ ಕ್ಷೇತ್ರದಲ್ಲಿ ಬರುವ ನಾಲಾ, ಗಟಾರುಗಳು, ಒಳಚರಂಡಿ ವ್ಯವಸ್ಥೆಗಳನ್ನು ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು. ಡೆಂಗ್ಯೂ, ಮಲೇರಿಯಾದಂತಹ ರೋಗಗಳು ಹರಡದಂತೆ ಎಲ್ಲ ವಾರ್ಡ್​ಗಳಲ್ಲಿ ಫಾಗಿಂಗ್ ಮಾಡಬೇಕೆಂದು ಸೂಚನೆ ನೀಡಿದರು.

ಸ್ಮಾರ್ಟ್​ಸಿಟಿ ಯೋಜನೆಯಡಿ ಬರುವ ಮಾರುಕಟ್ಟೆಗಳು ಮತ್ತು ಇನ್ನುಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಎಲ್ಲ ಕಾಮಗಾರಿಗಳನ್ನು ಖುದ್ದಾಗಿ ಪರಿಶೀಲಿಸುವುದಾಗಿ ಹೇಳಿದರು. ಬಿಆರ್​ಟಿಎಸ್ ಯೋಜನೆಯ ಲೋಪದೋಷಗಳನ್ನು ಸರಿಪಡಿಸುವಂತೆ ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಉಮೇಶಗೌಡ ಕೌಜಗೇರಿ, ರೂಪಾ ಶೆಟ್ಟಿ ಅವರು ಶಾಸಕರ ಮೂಲಕ ಅಧಿಕಾರಿಗಳ ಗಮನಕ್ಕೆ ತಂದರು.

ಎಲ್ ಆಂಡ್ ಟಿ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು, ನೀರು ಪೂರೈಕೆಯಲ್ಲಿ ಯಾವುದೇ ಸಮಸ್ಯೆಗಳು ಆಗಬಾರದು. ಸರಿಯಾದ ಸಮಯಕ್ಕೆ ಆಯಾ ಭಾಗಕ್ಕೆ ಸರಬರಾಜು ಮಾಡಬೇಕು ಎಂದು ಶಾಸಕರು ಅಧಿಕಾರಿಗಳು ನಿರ್ದೇಶನ ನೀಡಿದರು.

ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ, ಮುಖಂಡರಾದ ಸಿದ್ದು ಮೋಗಲಿಶೆಟ್ಟರ, ಚೇತನ ಬರದ್ವಾಡ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net