‘ಯುವಾ 2.0’ ಗೆ ಮಹೇಶ್ ಮೈಸೂರಿನ ಹಿರೇಮಠ ಆಯ್ಕೆ

17
Published on

ಮೈಸೂರು: ಕೇಂದ್ರ ಶಿಕ್ಷಣ ಸಚಿವಾಲಯವು ಭಾರತದಲ್ಲಿರುವ ಯುವ ಬರಹಗಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಯುವಾ 2.0 ಎಂಬ ಯೋಜನೆಯನ್ನು ರೂಪಿಸಿದ್ದು, ರಾಷ್ಟ್ರೀಯ ಮಟ್ಟದಲ್ಲಿ ನಡೆದ ಈ ಯೋಜನೆಗೆ ಕರ್ನಾಟಕದಿಂದ ಮಹೇಶ್ ಹಿರೇಮಠ ಎಂಬ ಮೈಸೂರಿನ ಯುವ ಬರಹಗಾರ ಆಯ್ಕೆಯಾಗಿದ್ದಾರೆ.

ಈ ಸ್ಪರ್ಧೆಗೆ ಭಾರತದ ವಿವಿಧ ಭಾಷೆಗಳಿಂದ ಸುಮಾರು 30 ಸಾವಿರಕ್ಕೂ ಅಧಿಕ ಯುವ ಬರಹಗಾರರ ಪ್ರಸ್ತಾವನೆಗಳು ಬಂದಿದ್ದವು. ಅವುಗಳಲ್ಲಿ ಅಂತಿಮವಾಗಿ 200 ಪ್ರಸ್ತಾವನೆಗಳನ್ನು ಆಯ್ಕೆ ಮಾಡಿ, 2023ರ ಅ. 25 ಮತ್ತು 26 ರಂದು ನವದೆಹಲಿಯ ನ್ಯಾಷನಲ್ ಬುಕ್ ಟ್ರಸ್ಟ್‌ನಲ್ಲಿ ಉನ್ನತ ತಜ್ಞರ ಸಮಿತಿಯು 200 ಯುವ ಬರಹಗಾರರ ನೇರ ಸಂದರ್ಶನ ನಡೆಸಿತು. ಅಂತಿಮವಾಗಿ 41 ಯುವ ಬರಹಗಾರರನ್ನು ಮಾತ್ರ ಆಯ್ಕೆ ಮಾಡಿತು. ಹೀಗೆ ಆಯ್ಕೆಯಾದ ಯುವ ಬರಹಗಾರರಲ್ಲಿ ಕನ್ನಡ ಭಾಷೆಯಿಂದ ಮಹೇಶ್ ಹಿರೇಮಠ ಮಾತ್ರ ಆಯ್ಕೆಯಾಗಿದ್ದಾರೆ.

ಯೋಜನೆ ಹಿನ್ನೆಲೆ:

ಈ ಯೋಜನೆಯಲ್ಲಿ ಆಯ್ಕೆಯಾಗುವ ಯುವ ಬರಹಗಾರರಿಗೆ ಪ್ರತಿ ತಿಂಗಳು 50 ಸಾವಿರ ರೂ. ಗೌರವಧನವನ್ನು 6 ತಿಂಗಳುಗಳ ಕಾಲ ಪುಸ್ತಕ ಬರವಣಿಗೆಗಾಗಿ ನೀಡಲಾಗುತ್ತದೆ. ನಂತರ ನ್ಯಾಷನಲ್ ಬುಕ್ ಟ್ರಸ್ಟ್ ನವದೆಹಲಿ ಈ ಸಂಸ್ಥೆ ಪುಸ್ತಕ ಪ್ರಕಟಿಸಿ, ಭಾರತದ 22 ಭಾಷೆಗಳಿಗೆ ಈ ಪುಸ್ತಕವನ್ನು ಅನುವಾದ ಕೂಡ ಮಾಡಲಿದೆ.
ವಿಶೇಷತೆ: ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಯುವ 2.0 ಯೋಜನೆಗೆ ಆಯ್ಕೆಯಾದ 41 ಯುವ ಬರಹಗಾರರನ್ನು ಫೆ.10ರಂದು ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಿ ವಿಶೇಷ ಔತಣಕೂಟ ಏರ್ಪಡಿಸಿ ಅಭಿನಂದಿಸಿದ್ದಾರೆ. ಹೀಗೆ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಂದ ಅಭಿನಂದನೆಗೆ ಪಾತ್ರರಾದ ವಿವಿಧ ಭಾಷೆಗಳ ಯುವ ಬರಹಗಾರರಲ್ಲಿ ಮಹೇಶ್ ಹಿರೇಮಠ ಕನ್ನಡ ಭಾಷೆಯನ್ನು ಪ್ರತಿನಿಧಿಸಿದ್ದರು.

ಹಿರೇಮಸಳಿ ಗ್ರಾಮದ ನಿವಾಸಿ:

ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದವರಾದ ಮಹೇಶ್ ಹಿರೇಮಠ ಧಾರವಾಡದ ಪ್ರತಿಷ್ಠಿತ ಕರ್ನಾಟಕ ಕಾಲೇಜಿನಲ್ಲಿ ಅಪರಾಧಶಾಸ್ತ್ರ ಮತು ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಪೂರೈಸಿದ್ದಾರೆ. ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಇಎಂಎಂಆರ್‌ಸಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ.
ಸದ್ಯ ಮೈಸೂರಿನಲ್ಲಿ ನೆಲೆಸಿರುವ ಮಹೇಶ್ ಹಿರೇಮಠ ಅವರು ತಮ್ಮ 20ನೇ ವಯಸ್ಸಿನಲ್ಲೇ ಧರ್ಮ ಮತ್ತು ಕಾಮದ ನಡುವಿನ ಸಂಘರ್ಷದ ಕಥಾಹಂದರವನ್ನು ಹೊಂದಿರುವ ‘ಆ ನೆನಪುಗಳು’ ಎಂಬ ಕಾದಂಬರಿಯನ್ನು ಬರೆದಿದ್ದಾರೆ. ವಿದ್ಯಾರ್ಥಿದೆಸೆಯಿಂದಲೂ ಬರಹ ಮತ್ತು ಸಾಕ್ಷೃಚಿತ್ರ ನಿರ್ಮಾಣದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಮಹೇಶ್ ಹಿರೇಮಠ ಅವರು ಮೂರು ಸಾಕ್ಷೃಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರು ನಿರ್ದೇಶಿಸಿರುವ ಸಾಕ್ಷೃಚಿತ್ರಗಳು ಕೇಂದ್ರ ಸರ್ಕಾರದ ವಿಜ್ಞಾನ ಪ್ರಸಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿ, ಮುಂಬೈ, ಕೋಲ್ಕತ್ತಾ ಮತ್ತು ಗುವಾಹಟಿಯಲ್ಲಿ ಪ್ರದರ್ಶನಗೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net