

ಉಡುಪಿ: ಯಕ್ಷಗಾನ ಕಲಾರಂಗದ ಕಾರ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಣಿಪಾಲದ ಮಾಹೆಯ ಆಡಳಿತ ಸೌಧದಲ್ಲಿ ಗುರುವಾರ ಮಾಹೆಯ ಅಧ್ಯಕ್ಷ ಡಾ. ರಂಜನ್ ಆರ್. ಪೈ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಇವರಿಗೆ ರೂ. 50 ಲಕ್ಷ ಮೊತ್ತದ ದೇಣಿಗೆ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಂಜನ್ ಆರ್. ಪೈ ಅವರು, ಸಂಸ್ಥೆಯ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಪ್ರತಿವರ್ಷ 10 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು. ಮಾಹೆ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ, ಕುಲಪತಿಗಳಾದ ಡಾ. ಎಂ. ಡಿ. ವೆಂಕಟೇಶ್ ಮತ್ತು ಸಹ ಉಪಕುಲಪತಿ ಡಾ. ನಾರಾಯಣ ಸಭಾಹಿತ್ ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಸಂಸ್ಥೆಯ ಕಾರ್ಯಚಟುವಟಿಕೆ ವಿವರಿಸಿ, ಇನ್ಫೋಸಿಸ್ ಫೌಂಡೇಶನ್ ಸಂಸ್ಥೆಗೆ ಬೃಹತ್ ಕಟ್ಟಡದ ಕೊಡುಗೆ ನೀಡಿದೆ. ಇದು ಉಡುಪಿಯ ಸಾಂಸ್ಕೃತಿಕ ಕ್ಷೇತ್ರಕ್ಕೆ ವರದಾನವಾಗಿದೆ. ಸಂಸ್ಥೆ ಯಕ್ಷಗಾನ ಕಲೆ-ಕಲಾವಿದರ ಪೋಷಣೆ, ಯಕ್ಷಶಿಕ್ಷಣ, ವಿದ್ಯಾಪೋಷಕ್ ಹೀಗೆ ನಾಲ್ಕು ಮುಖಗಳಲ್ಲಿ ಕೆಲಸಮಾಡುತ್ತಿದೆ ಎಂದು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ವಿ. ಜಿ. ಶೆಟ್ಟಿ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಬಿ. ಭುವನ ಪ್ರಸಾದ್ ಹೆಗ್ಡೆ, ಜತೆ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಹಾಗೂ ಎಚ್. ಎನ್. ಶೃಂಗೇಶ್ವರ ಭಾಗವಹಿಸಿದ್ದರು.