

ಉಡುಪಿ: ಶಾಂತನು ಶೆಟ್ಟಿ ಚಾರಿಟಬಲ್ ಟ್ರಸ್ಟ್ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮ ಜನರ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆಯೇ ಪ್ರತಿಯೊಬ್ಬರಿಗೂ ಉತ್ತಮ ಗುಣಮಟ್ಟದ ವೈದ್ಯಕಿಯ ಸೇವೆಗಳು ತಲುಪುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಆರೋಗ್ಯ ಸೇವೆಗಳು ಮತ್ತು ಜನರ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಟ್ರಸ್ಟ್ನ ನಿರಂತರ ಪ್ರಯತ್ನ ನಡೆಸುತ್ತಿದೆ. ಆರ್ಥಿಕ ಅಡಚಣೆಯಿಂದ ಅಗತ್ಯ ವೈದ್ಯಕೀಯ ಆರೈಕೆಯಿಂದ ಯಾರೂ ವಂಚಿತರಾಗಬಾರದು. ಪ್ರತಿಯೊಬ್ಬರಿಗೂ ಸೂಕ್ತ ಚಿಕಿತ್ಸೆ ದೊರಕುವಂತಾಗಬೇಕು ಎಂದು ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಹೇಳಿದರು.
ಪರ್ಕಳದಲ್ಲಿ ಶಾಂತನು ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮಣಿಪಾಲ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಸಹಯೋಗದೊಂದಿಗೆ ಶಾಂತನು ಶೆಟ್ಟಿ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕಿಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಶಾಂತನು ಶೆಟ್ಟಿ ಚಾರಿಟೇಬಲ್ ಟ್ರಸ್ಟ್ 50 ಲಕ್ಷಗಳ ನಿಧಿಯನ್ನು ನೀಡಲಿದೆ. ಅದಕ್ಕೆ ಸಮನಾದ ಮೊತ್ತವನ್ನು ಮಾಹೆ ನೀಡಲಿದೆ. ಈ ಒಟ್ಟು ನಿಧಿಯಿಂದ ಉತ್ಪತ್ತಿಯಾಗುವ ಬಡ್ಡಿಯಿಂದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಉಡುಪಿ ಡಾ.ಟಿ.ಎಂ.ಎ ಪೈ ಆಸ್ಪತ್ರೆ ಮತ್ತು ಕಾರ್ಕಳದ ಡಾ.ಟಿ.ಎಂ.ಎ ಪೈ ರೋಟರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗುವ ಶಾಂತನು ಶೆಟ್ಟಿ ಆರೋಗ್ಯ ಕಾರ್ಡ್ ಹೊಂದಿರುವ ರೋಗಿಗಳಿಗೆ ರಿಯಾಯಿತಿದರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದರು.
ಡಾ.ಟಿಎಂಎ ಪೈ ಆಸ್ಪತ್ರೆ ವೈದ್ಯಕಿಯ ಅಧೀಕ್ಷಕ ಡಾ.ಶಶಿಕಿರಣ್ ಉಮಾಕಾಂತ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಂತನು ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸೋಮನಾಥ ಶೆಟ್ಟಿ ಉಪಸ್ಥಿತರಿದ್ದರು. ಗೌರವ ಅತಿಥಿಗಳಾಗಿ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್, ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ.ಶರತ್ ಕೆ. ರಾವ್, ಮಾಹೆ ಬೋಧನಾ ಆಸ್ಪತ್ರೆಗಳ ಸಿ ಓ ಓ ಡಾ.ಆನಂದ್ ವೇಣುಗೋಪಾಲ್, ಕೆ ಎಂ ಸಿ ಡೀನ್ ಡಾ. ಡಾ.ಪದ್ಮರಾಜ್ ಹೆಗ್ಡೆ, ಉಪಸ್ಥಿತರಿದ್ದರು. ಟ್ರಸ್ಟ್ ನ ನಟರಾಜ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.