ಮಣಿಪಾಲ್​ ಆರೋಗ್ಯ ಕಾರ್ಡ್​ ನೋಂದಣಿ ಆರಂಭ

udp-18-card
Published on

ಉಡುಪಿ: ಬಡವರಿಗೆ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ 2000ರಲ್ಲಿ ಆರಂಭಿಸಲಾದ ಮಣಿಪಾಲ್​ ಆರೋಗ್ಯ ಕಾರ್ಡ್​ ಯೋಜನೆ ಸಮಗ್ರ ಕುಟುಂಬ ಆರೋಗ್ಯ ರಕ್ಷಣೆಗೆ ಪೂರಕವಾಗಿದೆ. ಈ ಬಾರಿ ನವೀಕರಣ ಅವಧಿ 2 ವರ್ಷಕ್ಕೆ ಏರಿಕೆ ಮಾಡಲಾಗಿದೆ ಎಂದು ಮಾಹೆ ಸಹಕುಲಾಧಿಪತಿ ಡಾ. ಎಚ್​. ಎಸ್​. ಬಲ್ಲಾಳ್​ ಹೇಳಿದರು.

ಮಂಗಳವಾರ ಮಾಹೆ ವತಿಯಿಂದ ಜಾರಿಗೆ ತಂದಿರುವ ಮಣಿಪಾಲ ಆರೋಗ್ಯ ಕಾರ್ಡ್​ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಉತ್ತರ ಕನ್ನಡ, ಹಾವೇರಿ, ಚಿಕ್ಕಮಗಳೂರು, ಬಳ್ಳಾರಿ ಹಾಗೂ ಕೇರಳ ಮತ್ತು ಗೋವಾಗಳಲ್ಲಿನ ಮಣಿಪಾಲ ಸಮೂಹ ಆಸ್ಪತ್ರೆಗಳಲ್ಲಿ ರಿಯಾಯಿತಿ ದರದಲ್ಲಿ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ ಎಂದರು.

ಮಾಹೆ ಮಣಿಪಾಲದ ಸಹಕುಲಪತಿ (ಆರೋಗ್ಯ ವಿಜ್ಞಾನ) ಡಾ. ಶರತ್​ ಕೆ. ರಾವ್​, ಆರೋಗ್ಯ ಕಾರ್ಡ್​ಗೆ 2023ರಲ್ಲಿ 3.60 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದು, ಈ ಬಾರಿ 40 ಲಕ್ಷದ ಗುರಿ ಇರಿಸಿಕೊಳ್ಳಲಾಗಿದೆ. ಮಣಿಪಾಲ ಆಸ್ಪತ್ರೆಯಲ್ಲಿ ಹೊರರೋಗಿ ವಿಭಾಗದಲ್ಲಿ 52 ಶೇ. ಮತ್ತು ಒಳರೋಗಿ ವಿಭಾಗದಲ್ಲಿ ಶೇ. 20 ಮಂದಿ ಕಾರ್ಡ್​ ಬಳಸುತ್ತಿದ್ದು, ಕಳೆದ ಸಾಲಿನಲ್ಲಿ ಸುಮಾರು 16 ಕೋಟಿ ರೂ. ರಿಯಾಯಿತಿ ನೀಡಲಾಗಿದೆ ಎಂದರು.
ಕೆಎಂಸಿ ವೈದ್ಯಕಿಯ ಅಧೀಕ್ಷಕ ಡಾ. ಅವಿನಾಶ್​ ಶೆಟ್ಟಿ ಮಾತನಾಡಿ, ಕಾರ್ಡುದಾರರು ತಜ್ಞ ಮತ್ತು ಸೂಪರ್​ ಸ್ಪೆಷಲಿಸ್ಟ್​ ವೈದ್ಯರ ಸಮಾಲೋಚನೆ ಶುಲ್ಕದಲ್ಲಿ ಶೇ. 50, ರೋಗರ್ನಿಣಯ ಮತ್ತು ಪ್ರಯೋಗಾಲಯಗಳಲ್ಲಿ ಶೇ. 25, ಎಕ್ಸ್​ರೇ, ಹೊರರೋಗಿ ವಿಭಾಗ ಮತ್ತು ಮಧುಮೇಹ ಪಾದದ ಆರೈಕೆಯಲ್ಲಿ ಶೇ. 20, ಡಯಾಲಿಸಿಸ್​ನಲ್ಲಿ ರೂ. 100, ಆಸ್ಪತ್ರೆಯ ಔಷಧಾಲಯಗಳ ಔಷಧಿಗಳಿಗೆ ಮೇಲೆ ಶೇ 10. ರಿಯಾಯಿತಿ ಮತ್ತು ಜನರಲ್​ ವಾರ್ಡ್​ನಲ್ಲಿ ಒಳರೋಗಿಗಳ ಬಿಲ್​ನಲ್ಲಿ ಶೇ 25ರಷ್ಟು ರಿಯಾಯಿತಿ ಪಡೆಯಬಹುದು ಎಂದು ತಿಳಿಸಿದರು.

ಡಾ. ಟಿಎಂಎ ಪೈ ಉಡುಪಿ ಆಸ್ಪತ್ರೆ ವೈದ್ಯಕಿಯ ಅಧೀಕ್ಷಕ ಡಾ. ಶಶಿಕಿರಣ್​, ಮಾಹೆ ಮಣಿಪಾಲ ನಿರ್ವಹಣಾಧಿಕಾರಿ ಸಿ.ಜಿ ಮುತ್ತಣ್ಣ, ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ. ಆನಂದ್​ ವೇಣುಗೋಪಾಲ್​, ಕಾರ್ಕಳ ಡಾ.ಟಿ.ಎಂ.ಎ.ಪೈ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಕೀರ್ತಿನಾಥ್​ ಬಲ್ಲಾಳ್​ ಹಾಗೂ ಮಾರ್ಕೆಟಿಂಗ್​ ಮುಖ್ಯಸ್ಥ ಕೆ. ಸಚಿನ್​ ಕಾರಂತ್​ , ಮಾರ್ಕೆಟಿಂಗ್​ ವಿಭಾಗದ ವ್ಯವಸ್ಥಾಪಕ ಮೋಹನ್​ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net