

ಉಡುಪಿ: ವೈದ್ಯಕಿಯ ಚಿಕಿತ್ಸೆಯ ಅಗತ್ಯವಿರುವ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ದತ್ತಿ ನಿಧಿ ಸ್ಥಾಪಿಸಲಾಗಿದ್ದು, ಮಾಹೆ ಮಣಿಪಾಲ ಮತ್ತು ಶಾಂತನು ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ನಡುವೆ ಒಪ್ಪಂದಕ್ಕೆ ಗುರುವಾರ ಸಹಿ ಹಾಕಲಾಗಿದೆ. ಮಾಹೆ ಮಣಿಪಾಲದ ರಿಜಿಸ್ಟ್ರಾರ್ ಡಾ.ಗಿರಿಧರ್ ಕಿಣಿ ಮತ್ತು ಶಾಂತನು ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಸೋಮನಾಥ ಶೆಟ್ಟಿ ಅಧಿಕೃತವಾಗಿ ಒಪ್ಪಂದ ಪತ್ರ ಹಂಚಿಕೊಂಡರು.
ಶಾಂತನು ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಸೋಮನಾಥ ಶೆಟ್ಟಿ ನಿಧಿಯ ಮೊದಲ ಕಂತನ್ನು ಮಣಿಪಾಲ ಶಿಕ್ಷಣ ಮತ್ತು ವೈದ್ಯಕಿಯ ಸಮೂಹದ ಅಧ್ಯಕ್ಷ ಡಾ. ರಂಜನ್ ಆರ್. ಪೈ ಮತ್ತು ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್.ಎಸ್ ಬಲ್ಲಾಳ್ ಸಮ್ಮುಖದಲ್ಲಿ ಮಾಹೆ ಮಣಿಪಾಲದ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ ವೆಂಕಟೇಶ್ ಮತ್ತು ರಿಜಿಸ್ಟ್ರಾರ್ ಡಾ. ಗಿರಿಧರ್ ಕಿಣಿ ಅವರಿಗೆ ಹಸ್ತಾಂತರಿಸಿದರು.
ಮಾಹೆ ಮಣಿಪಾಲದ ಸಹ ಕುಲಪತಿ ಡಾ.ಶರತ್ ಕುಮಾರ್ ರಾವ್, ಕೆಎಂಸಿ ಮಣಿಪಾಲದ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕಿಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಸಾರ್ವಜನಿಕ ಸಂಪರ್ಕ ಮತ್ತು ಸಂವಹನ ವಿಭಾಗದ ಉಪನಿರ್ದೇಶಕ ಸಚಿನ್ ಕಾರಂತ್ ಉಪಸ್ಥಿತರಿದ್ದರು. ಶಾಂತನು ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿ ಜಿತೇಂದ್ರ ಹೆಗ್ಡೆ, ರಾಜಾರಾಂ ಹೆಗ್ಡೆ, ನಟರಾಜ್ ಹೆಗ್ಡೆ, ಗೋಪಿನಾಥ ಶೆಟ್ಟಿ, ಮತ್ತು ಅಶ್ವಿನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಶಾಂತನು ಶೆಟ್ಟಿ ಚಾರಿಟೇಬಲ್ ಟ್ರಸ್ಟ್ 4 ವರ್ಷದಲ್ಲಿ ಪ್ರತಿ ವರ್ಷ 25 ಲಕ್ಷ ರೂ. ಠೇವಣಿ ಇಡಲಿದೆ. ಮಾಹೆ ಮಣಿಪಾಲ ಸಂಸ್ಥೆ ಸಮಾನ ಮೊತ್ತವನ್ನು ಹೊಂದಿಸಿ ಶಾಶ್ವತ ನಿಧಿಯನ್ನು ರಚಿಸಲಾಗುತ್ತದೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ವೈದ್ಯಕಿಯ ಚಿಕಿತ್ಸೆ ಅಗತ್ಯವಿರುವ ಉಡುಪಿ ತಾಲೂಕಿನ ಆತ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಬಡ ರೋಗಿಗಳಿಗೆ ಸಹಾಯ ಮಾಡಲು ಈ ನಿಧಿಯನ್ನು ಮೀಸಲಿಡಲಾಗಿದೆ.