

ವಿಜಯಪುರ: ಜೈನ ಧರ್ಮದ 24ನೇ ತೀರ್ಥಂಕರರಾದ ಭಗವಾನ್ ಮಹಾವೀರರ ಸತ್ಯ, ಅಹಿಂಸೆ, ಕರುಣಾಭಾವದಂತಹ ತತ್ವಗಳು ಸಾರ್ವಕಾಲಿಕ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದರು.
ನಗರದ ಕಂದಗಲ್ಲ ಹನಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿ.ಪಂ. ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಹಾವೀರರು ಅಹಿಂಸೆ ಆಚರಣೆಯ ಮಾರ್ಗದಲ್ಲಿ ಜೀವನದ ಸಾಾತ್ಕಾರದ ಪಥ ತೋರಿಸಿದ ಮಹಾಪುರುಷ ಎಂದರು.
ಸಕಲ ಜೀವಿಗಳಿಗೂ ಒಳಿತು ಬಯಸಿದ ಮಹಾವೀರರು, ಆ ದಿಸೆಯಲ್ಲಿ ಜೀವನ ಮುಡುಪಾಗಿರಿಸಿದ್ದರು. ಅವರು ಅಹಿಂಸೆ, ತ್ಯಾಗ ಹಾಗೂ ವೈರಾಗ್ಯದ ಸಾಕಾರಮೂರ್ತಿಯಾಗಿದ್ದರು. ಯುವಜನತೆ ಸಂತರು, ಸತ್ಪುರುಷರು, ದಾರ್ಶನಿಕರ ಜೀವನಾದರ್ಶಗಳು ಹಾಗೂ ಅವರು ನೀಡಿದ ಸಂದೇಶ ಅರಿತುಕೊಂಡು ಅಳವಡಿಸಿಕೊಳ್ಳಬೇಕಿದೆ ಎಂದರು.
ಮಹಾವೀರರು 30ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದರು. ನೀನು ಜೀವಿಸು ಇತರಿಗೂ ಜೀವಿಸಲು ಅವಕಾಶ ನೀಡು. ಸತ್ಯವನ್ನೇ ನುಡಿ, ಕಳ್ಳತನ ಮಾಡಬೇಡ, ಸುಳ್ಳು ಹೇಳಬೇಡ, ಅಹಿಂಸೆಯೇ ಪರಮ ಧರ್ಮ ಎಂಬ ವಿಚಾರ ಪ್ರತಿಪಾದಿಸುವ ಮೂಲಕ ಮಹಾವೀರರು ಜಗತ್ತಿಗೆ ಉತ್ತಮ ಸಂದೇಶ ನೀಡುವ ಜತೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಮಾತನಾಡಿ, ಭಗವಾನ್ ಮಹಾವೀರರ ತತ್ವ ಸಿದ್ಧಾಂತಗಳನ್ನು ಯುವಕರು ಪಾಲನೆ ಮಾಡುವುದರ ಜತೆಗೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಅಲ್ ಅಮೀನ್ ವೈದ್ಯಕಿಯ ಕಾಲೇಜಿನ ಪ್ರಾಧ್ಯಾಪಕ ಡಾ. ಕಿರಣ ಓಸ್ವಾಲ್ ಉಪನ್ಯಾಸ ನೀಡಿ, ಭಗವಾನ್ ಮಹಾವೀರರು ಸರಳ ಭಾಷೆಯಲ್ಲಿ ಹಲವು ಸಂದೇಶಗಳನ್ನು ಸಾರಿದರು ಎಂದರು.
ಸಾನ್ನಿಧ್ಯ ವಹಿಸಿದ್ದ ಆಚಾರ್ಯ ಹೀರಾಚಂದ ವಿಜಯಜಿ ಮಹಾರಾಜ ಆಶೀರ್ವಚನ ನೀಡಿದರು. ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಸ್ವಾಗತಿಸಿದರು. ಪಾಲಿಕೆಯ ವಲಯ ಆಯುಕ್ತ ಮಹಾವೀರ ಬೋರನ್ನವರ ವಂದಿಸಿದರು.
ಅದಕ್ಕೂ ಮುನ್ನ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ನಡೆದ ಭಗವಾನ್ ಮಹಾವೀರರ ಭಾವಚಿತ್ರದ ಮೆರೆವಣಿಗೆಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಪುಷ್ಟ ನಮನ ಸಲ್ಲಿಸಿ ಚಾಲನೆ ನೀಡಿದರು.
ಜಿ.ಪಂ. ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ, ಮುಖಂಡರಾದ ಮಹಾವೀರ ಪಾರೇಖ, ನಿತಿನ್ ರುಣವಾಲ್, ಮದನ್ ಜೈನ, ಅರುಣ ರುಣವಾಲ, ವಿಜಯ ರುಣವಾಲ, ವಿಕ್ರಮ ರುಣವಾಲ, ಅಶೋಕ ರುಣವಾಲ, ವಿದ್ಯಾವತಿ ಅಂಕಲಗಿ ಮತ್ತಿತರರಿದ್ದರು.