ವರ್ಧಮಾನ ಮಹಾವೀರ ಮಹಾನ್ ಚೇತನ: ಜಿಲ್ಲಾಧಿಕಾರಿ ಡಾ.ಕುಮಾರ ಬಣ್ಣನೆ

Mahavira Jayantyutsava Mandya
Published on

ಮಂಡ್ಯ: ಸಮಾಜವನ್ನು ಸತ್ಯ ಮತ್ತು ಶಾಂತಿಯ ಕಡೆ ಕೊಂಡ್ಯೊಯ್ದ ಮಹಾನ್ ಚೇತನ ವರ್ಧಮಾನ ಮಹಾವೀರ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜೈನ ಬೀದಿಯಲ್ಲಿರುವ ಅನಂತನಾಥ ಸ್ವಾಮಿ ದೇವಾಲಯ(ದಿಗಂಬರ ದೇವಾಲಯ)ದಲ್ಲಿ ಆಯೋಜಿಸಿದ್ದ ಮಹಾವೀರ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಜಗತ್ತಿಗೆ ಆಧ್ಯಾತ್ಮದ ಚಿಂತನೆಯನ್ನು ಜೈನ ಧರ್ಮದ 24ನೇ ತೀರ್ಥಂಕರ ಮಹಾವೀರರು ನೀಡಿದ್ದಾರೆ ಎಂದು ತಿಳಿಸಿದರು.

ಮಹಾವೀರರ ತತ್ವ, ಮೌಲ್ಯ ಮತ್ತು ಅವರು ಬೋಧಿಸಿದ 5 ಪಂಚಶೀಲ ತತ್ವಗಳಾದ ಸತ್ಯ, ಅಹಿಂಸೆ, ಅಪರಿಗ್ರಹ, ಕ್ಷಮೆ ಮತ್ತು ಬ್ರಹ್ಮಚಾರ್ಯವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಸುಖ ಶಾಂತಿಯಿಂದ ಸಹಬಾಳ್ವೆಯಿಂದ ಜೀವನ ನಡೆಸಬಹುದು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಜೈನ ಸಮುದಾಯದ ಅಧ್ಯಕ್ಷ ಶಾಂತಿ ಪ್ರಸಾದ್ ಜೈನ್, ಮುಖಂಡರಾದ ರಾಕೇಶ್ ಜೈನ್, ಶ್ರೀಧರ್ ಜೈನ್, ಶಶಿಧರ್ ಜೈನ್, ಪದ್ಮನಾಭ ಜೈನ್ ಇತರರಿದ್ದರು.

ಜಯಂತ್ಯುತ್ಸವದ ಅಂಗವಾಗಿ ಮೆರವಣಿಗೆ ಆಯೋಜಿಸಲಾಗಿತ್ತು. ಅನಂತನಾಥ ಸ್ವಾಮಿ ದೇವಾಲಯದ ಎದುರು ಮಹಾವೀರ ಪುತ್ತಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಿಲ್ಲಾಧಿಕಾರಿ ಡಾ.ಕುಮಾರ ಚಾಲನೆ ನೀಡಿದರು. ವರ್ಣರಂಜಿತ ರಥದ ಮೇಲೆ ಇರಿಸಲಾಗಿದ್ದ ಮಹಾವೀರರ ಪುತ್ತಳಿ ಪ್ರತಿಷ್ಠಾಪಿಸಿ ಬ್ಯಾಂಡ್ ಸೆಟ್ ಮೂಲಕ ನಗರದ ಪೇಟೆ ಬೀದಿ ಮೂಲಕ ನಂದಾ ವೃತ್ತ, ಮೈಸೂರು ರಸ್ತೆಯಲ್ಲಿ ಮೆರವಣಿಗೆ ಸಾಗಿ ಮೂಲಸ್ಥಾನ ದೇವಾಲಯಕ್ಕೆ ಮರಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net