ನಾಳೆಯಿಂದ ಮಹಾವೀರ ಜನ್ಮ ಕಲ್ಯಾಣೋತ್ಸವ : ಸಾವಿರಕಂಬ ಬಸದಿಯ ಕಿರಿಯ, ಹಿರಿಯ ರಥೋತ್ಸವ

Published on

ಮೂಡುಬಿದಿರೆ : ಭಗವಾನ್ ಶ್ರೀ ಮಹಾವೀರ ಸ್ವಾಮಿಯ 2624ನೇ ಜನ್ಮ ಕಲ್ಯಾಣ ಮಹೋತ್ಸವ, ಸಾವಿರಕಂಬ ಬಸದಿಯ ಕಿರಿಯ ಮತ್ತು ಹಿರಿಯ ರಥೋತ್ಸವ ಹಾಗೂ ಆಚಾರ್ಯ 108 ವಿದ್ಯಾನಂದ ಮುನಿ ಮಹಾರಾಜರ ಜನ್ಮ ಶತಾಬ್ದಿ ಕಾರ್ಯಕ್ರಮ ಏ.7ರಿಂದ 13ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿವೆ ಎಂದು ಜೈನ ಮಠದ ಸ್ವಸ್ತಿ ಶ್ರೀ ಭಟ್ಟಾರಕ ಸ್ವಾಮೀಜಿ ತಿಳಿಸಿದರು.

ಮಹಾವೀರ ಜಯಂತಿ ದಿನವಾದ ಏ.10ರಂದು ಮಧ್ಯಾಹ್ನ 3.30ಕ್ಕೆ ಬೆಟ್ಕೇರಿಯಿಂದ ಮಹಾವೀರ ಸ್ವಾಮಿಯ ವೈಭವದ ಮೆರವಣಿಗೆ ಸಾವಿರಕಂಬ ಬಸದಿವರೆಗೆ ನಡೆಯಲಿದೆ. 125 ಮಂದಿಯಿಂದ ಸಾಮೂಹಿಕ ಅಷ್ಟ ವಿಧಾರ್ಚನೆ ಸೇವೆ ನೆರವೇರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

11ರಂದು ರಾತ್ರಿ 7.30ರಿಂದ ಬಸದಿಯಲ್ಲಿ ಕಿರಿಯ ರಥೋತ್ಸವ, 2624ನೇ ಮಹಾವೀರ ಜನ್ಮ ಕಲ್ಯಾಣ ನಡೆಯಲಿದೆ. ಮೂಡುಬಿದಿರೆ ಶ್ರೀಗಳು ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡುವರು. ಕೆ.ಹೇಮರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉದ್ಯಮಿ ಪುಪ್ಪರಾಜ್ ಜೈನ್ ಮಹಾವೀರ ಜ್ಯೋತಿ ಬೆಳಗಲಿದ್ದಾರೆ. ಶಾಸಕ ಉಮಾನಾಥ ಎ.ಕೋಟ್ಯಾನ್, ಕೆ.ಸುನೀಲ್ ಜೈನ್ ರೋಟಕ್, ಕೆ.ಪಿ.ಜಗದೀಶ್ ಅಧಿಕಾರಿ, ಸಂಪತ್ ಸಾಮ್ರಾಜ್ಯ ಶಿರ್ತಾಡಿ, ವಕೀಲ ಎಂ.ಬಾಹುಬಲಿ ಪ್ರಸಾದ್, ಕಲ್ಲಬೆಟ್ಟು ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಯುವರಾಜ್ ಜೈನ್ ಮುಖ್ಯ ಅತಿಥಿಗಳಾಗಿರುವರು. ಸಂಶೋಧಕ ಅರ್ಕುಳ ಬೀಡಿನ ಡಾ.ಜಯಕುಮಾರ್ ಶೆಟ್ಟಿ ಪ್ರಧಾನ ಉಪನ್ಯಾಸ ನೀಡಲಿದ್ದಾರೆ. ಸುನೀಲ್ ಜೈನ್- ಅರ್ಚನಾ ರೋಟಕ್, ವೀರಪ್ರಸಾದ್- ಸಿದ್ಧಾರ್ಥ ಜೈನ್ ವಯನಾಡು ಹಾಗೂ ವೃಷಭ ಜೈನ್- ಪುಷ್ಪಾ ಜೈನ್ ಬೆಂಗಳೂರು ಅವರಿಗೆ ಸನ್ಮಾನ ನಡೆಯಲಿದೆ. ರಾತ್ರಿ 8.30ರಿಂದ ಧವಲತ್ರಯ ಜೈನಕಾಶಿ ಟ್ರಸ್ಟ್, ಶ್ರೀ ಜೈನ ಮಠ ಟ್ರಸ್ಟ್ ವತಿಯಿಂದ ಎಕ್ಸಲೆಂಟ್ ಕಾಲೇಜು ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ವಕೀಲ ಎಂ.ಬಾಹುಬಲಿ ಪ್ರಸಾದ್, ಪಟ್ಣಶೆಟ್ಟಿ ಎಂ.ಸುದೇಶ್ ಕುಮಾರ್, ಉದ್ಯಮಿ ಶೈಲೇಂದ್ರ ಕುಮಾರ್ ಹಾಗೂ ಜೈನ್ ಮಿಲನ್‌ನ ಪುಷ್ಪರಾಜ್ ಜೈನ್ ಸುದ್ದಿಗೋಷ್ಠಿಯಲ್ಲಿದ್ದರು.

12ರಂದು ಶ್ರಮಣ ಸಂಸ್ಕೃತಿ ಸಮ್ಮೇಳನ

ಶ್ರಮಣ ಸಂಸ್ಕೃತಿ ಸಮ್ಮೇಳನ 12ರಂದು ನಡೆಯಲಿದ್ದು, ರಾತ್ರಿ 7.35ಕ್ಕೆ ತ್ರಿಭುವನ ತಿಲಕ ಚೂಡಾಮಣಿ ಬಸದಿ ಹಿರಿಯ ರಥೋತ್ಸವ ನಡೆಯಲಿದೆ. ಮೂಡುಬಿದಿರೆ ಜೈನ ಮಠದ ಭಟ್ಟಾರಕ ಡಾ.ಚಾರುಕೀರ್ತಿ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಲಿದ್ದಾರೆ. ವಕೀಲ ಎಂ.ಕೆ.ವಿಜಯ ಕುಮಾರ್ ಸಮ್ಮೇಳನ ಉದ್ಘಾಟಿಸುವರು. ಉದ್ಯಮಿ ಶೈಲೇಂದ್ರ ಕುಮಾರ್ ಶ್ರಮಣಜ್ಯೋತಿ ಬೆಳಗಿಸಲಿದ್ದಾರೆ. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ವಕೀಲೆ ಶ್ವೇತಾ ಜೈನ್, ಗುರುವಾಯನಕೆರೆ ಎಕ್ಸೆಲ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಸುಮಂತ್ ಜೈನ್ ಪ್ರಧಾನ ಅತಿಥಿಗಳಾಗಿರುವರು ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net