

ಮೂಡುಬಿದಿರೆ: ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿರುವ ವಿಷಯಗಳ ಬಗ್ಗೆ ಸತ್‌ಚಿಂತನೆ, ವಿಮರ್ಶೆ, ಏಕೆ, ಹೇಗೆ ಸರಿ, ಏಕೆ ತಪ್ಪು ಎಂಬಿತ್ಯಾದಿ ವಿಚಾರಗಳನ್ನು ಮಥನ ಮಾಡುವುದರಿಂದ ಹುಟ್ಟುವ ಅಮೃತ ಪಾನ ಮಾಡುವ ಭಾಗ್ಯ ನಮ್ಮದಾಗಬೇಕು. ಇದಕ್ಕೆ ಅಧ್ಯಯನ ಬೇಕು, ಜ್ಞಾನದ ಹುಡುಕಾಟ ಮಾಡುವ ಮನಸ್ಸು ಬೇಕು. ಇದು ಸನಾತನ ಧರ್ಮದಲ್ಲಿ ಹೇಳಲಾಗಿದೆ. ಜೈನ ತೀರ್ಥಂಕರರೂ ಹೇಳಿರುವುದು ಇದನ್ನೇ ಎಂದು ಅದಮಾರು ಮಠಾಧೀಶ ಈಶಪ್ರಿಯ ಸ್ವಾಮೀಜಿ ಹೇಳಿದರು.
ಸಾವಿರ ಕಂಬದ ಬಸದಿಯಲ್ಲಿ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಹಿರಿತನದಲ್ಲಿ ನಡೆದ ಭಗವಾನ್ ಮಹಾವೀರರ 2624ನೇ ಜನ್ಮ ಕಲ್ಯಾಣ ಮಹೋತ್ಸವ (ಮಹಾವೀರ ಜಯಂತಿ), ಕಿರಿಯ ರಥೋತ್ಸವ ಹಾಗೂ ಆಚಾರ್ಯ ವಿದ್ಯಾನಂದ ಮುನಿಮಹಾರಾಜರ ಜನ್ಮ ಶತಾಬ್ದಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಪೆರಾಡಿ ಬೆಳ್ಳಿಬೀಡು ಕೆ.ಹೇಮರಾಜ್ ಶ್ರೀ ಮಹಾವೀರ ಜನ್ಮ ಕಲ್ಯಾಣ ಉತ್ಸವ ಉದ್ಘಾಟಿಸಿದರು. ನಿವೃತ್ತ ಪ್ರಾಧ್ಯಾಪಕ ಅರ್ಕುಳ ಬೀಡು ಡಾ.ಜಯಕುಮಾರ ಶೆಟ್ಟಿ ಧಾರ್ಮಿಕ ಉಪನ್ಯಾಸ ನೀಡಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಹೊಸ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದರೆ ಸನಾತನ ಸಂಸ್ಕೃತಿ ಉಳಿದೀತು ಎಂದರು.
ಶಿರ್ತಾಡಿ ಸಂಪತ್ ಸಾಮ್ರಾಜ್ಯ, ಕೆ.ಪಿ.ಜಗದೀಶ ಅಧಿಕಾರಿ, ಹಿರಿಯ ವಕೀಲ ಎಂ.ಬಾಹುಬಲಿ ಪ್ರಸಾದ್, ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಬಸದಿಗಳ ಮೊಕ್ತೇಸರರಾದ ಪಟ್ಣ ಶೆಟ್ಟಿ ಸುಧೇಶ್ ಕುಮಾರ್, ಆದರ್ಶ ಅರಮನೆ ಉಪಸ್ಥಿತರಿದ್ದರು.
ಪಟ್ಣ ಶೆಟ್ಟಿ ಸುಧೇಶ್ ಕುಮಾರ್ ಸ್ವಾಗತಿಸಿ, ಜೈನ ಪ.ಪೂ.ಕಾಲೇಜಿನ ಪ್ರಾಚಾರ್ಯ ಡಾ.ಪ್ರಭಾತ್ ಬಲ್ನಾಡು ನಿರೂಪಿಸಿದರು. ಎಕ್ಸಲೆಂಟ್ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬಳಿಕ ಬಸದಿಯ ಕಿರಿಯ ರಥೋತ್ಸವ ಜರುಗಿತು. ಶ್ರೀ ಮೂಡುಬಿದಿರೆ ದಿಗಂಬರ ಜೈನ ವಿದ್ಯಾವರ್ಧಕ ಸಂಘದ ಸಂಚಾಲಕರಾಗಿ ನಾಲ್ಕು ದಶಕಗಳಿಂದಲೂ ಸೇವೆ ಸಲ್ಲಿಸುತ್ತಿರುವ ಬೆಳ್ಳಿಬೀಡು ಕೆ.ಹೇಮರಾಜ್ ಅವರನ್ನು ಸ್ವಾಮೀಜಿದ್ವಯರು ಸನ್ಮಾನಿಸಿದರು. ಮೂಲತಃ ಪಡಂಗಡಿಯವರಾದ ವಯನಾಡಿನ ಪುಷ್ಪಲತಾ ಶಾಂತಿ ವರ್ಮ, ಪುತ್ರ ವೀರ ಪ್ರಸಾದ್ ಪರಿವಾರವನ್ನು ಸನ್ಮಾನಿಸಲಾಯಿತು.
ಹೊಸ ಬಸದಿ, ಸಾವಿರ ಕಂಬದ ಬಸದಿ, ತ್ರಿಭುವನ ತಿಲಕ ಚೂಡಾಮಣಿ ಬಸದಿ ಎಂಬ ಹೆಸರುಗಳಿಂದ ಜಗದ್ವಿಖ್ಯಾತವಾಗಿರುವ ಸಾವಿರ ಕಂಬದ ಬಸದಿ ಕ್ರಿ.ಶ.1430ರಲ್ಲಿ ನಿರ್ಮಾಣವಾಗಿದೆ. ಹಾಗಾಗಿ 2030ರಲ್ಲಿ ಬಸದಿ ನಿರ್ಮಾಣದ 600ನೇ ವರ್ಷ ಆಚರಣೆ 2030ರಲ್ಲಿ ಜಾಗತಿಕ ಮಟ್ಟದಲ್ಲಿ ವೈಭವ ಪೂರ್ಣವಾಗಿ ನಡೆಸಲು ನಾವೆಲ್ಲರೂ ಸನ್ನದ್ಧರಾಗಬೇಕಾಗಿದೆ. ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮೂಡುಬಿದಿರೆ ಜೈನಮಠ https://www.vijayavani.net/inauguration-of-sullya-ca-bank-building https://www.vijayavani.net/nema-4