

ಸಿರಗುಪ್ಪ: ಮಹಾತ್ಮ ಗಾಂಧೀಜಿ, ಬಸವಣ್ಣ, ಬುದ್ಧ ನೀಡಿದ ಅಹಿಂಸಾ ಸಂದೇಶ ಪಾಲಿಸಿದರೆ ಎಂಥ ಸಮಸ್ಯೆಗಳನ್ನಾದರೂ ಎದುರಿಸಬಹುದು ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು. ನಗರದ ತಾಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರೊನಾ ವೈರಸ್ ಕೂಡ ಹಿಂಸೆಯಿಂದ ಬಂದಿದ್ದು, ಅದನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ಭಾರತ ಪುಣ್ಯ ಪುರುಷರು, ಮಹಾನ್ ವ್ಯಕ್ತಿಗಳು, ಸಾಧು ಸಂತರು ಹೊಂದಿರುವ ದೇಶವಾಗಿದ್ದು, ದೈವಿಕ ಶಕ್ತಿ ಇದೆ. ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕರೊನಾ ವೈರಸ್ ನಾಶ ಮಾಡಬಹುದು ಎಂದರು.
ತಹಸೀಲ್ದಾರ್ ಎಸ್.ಬಿ.ಕೂಡಲಗಿ ಮಾತನಾಡಿ, ಮನುಷ್ಯರಲ್ಲಿನ ಅಧರ್ಮ ಅಳಿಸಿ ಧರ್ಮದ ಹಾದಿಯಲ್ಲಿ ನಡೆಯುವಂತೆ ಮಾಡಿದವರು ಭಗವಾನ್ ಮಹಾವೀರರು. ಆಸ್ತಿ ಪಾಸ್ತಿ ತ್ಯಾಗ ಮಾಡಿ ಅಂಧಕಾರದಲ್ಲಿ ಮುಳುಗಿ ಹೋಗಿದ್ದ ಮನುಜರಿಗೆ ಜ್ಞಾನದ ಬೆಳಕು ನೀಡಿದರು ಎಂದು ಹೇಳಿದರು.
ಸಿಪಿಐ ಟಿ.ಆರ್.ಪವಾರ್, ಹಿಂದುಳಿದ ವರ್ಗಗಳ ವಿಸ್ತಾರಣಾಧಿಕಾರಿ ಶ್ಯಾಮಪ್ಪ, ಬಿಇಒ ಪಿ.ಡಿ.ಭಜಂತ್ರಿ, ಕೃಷಿ ಇಲಾಖೆ ಹಿರಿಯ ನಿರ್ದೇಶಕ ನಜೀರ್ ಅಹ್ಮದ್, ಪಿಎಸ್‌ಐ ಗಂಗಪ್ಪ ಬುರ್ಲಿ, ಸಿಡಿಪಿಒ ರಾಮಕೃಷ್ಣ ನಾಯಕ, ನರೇಗಾ ಅಧಿಕಾರಿ ನಿರ್ಮಲಾ, ಬಿಜೆಪಿ ತಾಲೂಕು ಅಧ್ಯಕ್ಷ ಪಂಪನಗೌಡ, ಮುಖಂಡರಾದ ಅಶೋಕ ಜೈನ್, ಕಿರಣ್‌ಜೈನ್, ಮಲ್ಲಿಕಾರ್ಜುನ ಇದ್ದರು.