

ಹಲಗೂರು: ಮಹಾತ್ಮ ಗಾಂಧೀಜಿ ಅವರ ತತ್ವ-ಆದರ್ಶ ವಿಶ್ವಮಾನ್ಯವಾಗಿರುವುದು ನಮ್ಮ ದೇಶದ ಹಿರಿಮೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಆಲಂಗೂರ್ ಮಂಜುನಾಥ್ ಅಭಿಪ್ರಾಯಿಸಿದರು.
ಇಲ್ಲಿನ ಚನ್ನಪಟ್ಟಣ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಮಹಾತ್ಮ ಗಾಂಧೀಜಿ ಅವರ 155ನೇ ಜಯಂತಿ ಕಾರ್ಯಕ್ರಮದ ಅಂಗವಾಗಿ ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಮೋಹನ ದಾಸ ಕರಮಚಂದ ಗಾಂಧಿ ಮಹಾತ್ಮರಾಗಲು ಅವರ ದೂರ ದೃಷ್ಟಿ, ಆಲೋಚನೆಗಳು, ಸಿದ್ಧಾಂತಗಳು, ಶೋಷಿತರ ಪರವಾಗಿ ಅವರಿಗಿದ್ದ ಕಾಳಜಿ, ದೇಶದ ಸ್ವಾತಂತ್ರ್ಯಕ್ಕಾಗಿ ಅವರು ತೆಗೆದುಕೊಂಡ ಪ್ರಯತ್ನಗಳು, ಅವರ ಸರಳ ಜೀವನ, ಆದರ್ಶ, ತ್ಯಾಗ ಕಾರಣ. ಇಡೀ ಜಗತ್ತು ಭಾರತದ ಸ್ವಾತಂತ್ರೃ ಹೋರಾಟಗಾರ, ರಾಷ್ಟ್ರೀಯ ಚಳವಳಿ ನಾಯಕ ಗಾಂಧೀಜಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರ ಆದರ್ಶ ಪಾಲಿಸುತ್ತಾ ಕೊಂಡಾಡುತ್ತಿರುವುದು ನಮ್ಮ ದೇಶ ಹೆಮ್ಮೆ ಎಂದರು.
ಪ್ರೊ. ಸುಧಾ ಬಿದರಿ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ತತ್ವ-ಆದರ್ಶ ಸರ್ವರೂ ಪಾಲಿಸುವಂತಹ ಮೌಲ್ಯಗಳು ಎಂದು ನುಡಿದರು. ವಿದ್ಯಾರ್ಥಿ ನಾಯಕ ಪ್ರಜ್ವಲ್ ಕುಮಾರ್, ಅಂತಿಮ ಬಿಎ, ಹಾಗೂ ಹರ್ಷಿತ್ ಗೌಡ, ಅಂತಿಮ ವಾಣಿಜ್ಯ ಪದವಿ, ಆಕಾಶ್, ಸಂಜಯ್, ವಿಕಾಸ್ ಮತ್ತು ಇತರ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಭಾಗವಹಿಸಿದ್ದರು.
ಕಾಲೇಜಿನ ಸಿಬ್ಬಂದಿ ಕುಮಾರಸ್ವಾಮಿ, ಶ್ರೀಧರ್ ಅವರು ಕಾರ್ಯಕ್ರಮದಲ್ಲಿ ಇದ್ದರು.