ಮಹಾತ್ಮ ಗಾಂಧೀಜಿ ವ್ಯಕ್ತಿತ್ವ ಅನುಕರಣೀಯ

Mahatma Gandhi's personality is exemplary.
ಮುಧೋಳ ನಗರದ ಕಸಾಪ ಭವನದಲ್ಲಿ ಸ್ವಾತಂತ್ರೃ ಹೋರಾಟಗಾರರಾದ ದಿ. ಸೀತಾಬಾಯಿ ಹಾಗೂ ಬಸಪ್ಪ ತಿಮಸಾನಿ ಸ್ಮರಣಾರ್ಥ ನಡೆದ 23ನೇ ದತ್ತಿ ಉಪನ್ಯಾಸ ಹಾಗೂ ಮಹಾತ್ಮ ಗಾಂಧೀಜಿ 156ನೇ ಜಯಂತೋತ್ಸವವನ್ನು ಗಾಂಧಿ ಚಿಂತಕ ವಿಜಯಪುರದ ನೇತಾಜಿ ಗಾಂಧಿ ಉದ್ಘಾಟಿಸಿದರು. ನ್ಯಾಯವಾದಿ ದಯಾನಂದ ಪಾಟೀಲ, ಕಸಾಪ ಅಧ್ಯಕ್ಷ ಆನಂದ ಪೂಜಾರಿ, ಕಾನಿಪ ಅಧ್ಯಕ್ಷ ಬಿ. ರತ್ನಾಕರ ಶೆಟ್ಟಿ ಇದ್ದರು.
Published on

ಮುಧೋಳ: ಭಾರತಕ್ಕೆ ಸ್ವಾತಂತ್ಯವನ್ನು ತಂದುಕೊಟ್ಟ ಮಹಾತ್ಮ ಗಾಂಧೀಜಿ ಅಹಿಂಸೆ ಮೂಲಕ ಬಾನೆತ್ತರಕ್ಕೆ ಬೆಳೆದ ಮಹಾ ನಾಯಕ ಎಂದು ವಿಜಯಪುರ ರಾಷ್ಟ್ರಪಿತ ಮಹಾತ್ಮ ಗಾಂಧಿ ಫೌಂಡೇಷನ್ ಅಧ್ಯಕ್ಷ ನೇತಾಜಿ ಗಾಂಧಿ ಹೇಳಿದರು.

ನಗರದ ಕಸಾಪ ಭವನದಲ್ಲಿ ಗುರುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕಾರ್ಯನಿರತ ಪತ್ರಕರ್ತರ ಸಂಘಗಳ ಆಶ್ರಯದಲ್ಲಿ ಸ್ವಾತಂತ್ರೃ ಹೋರಾಟಗಾರರಾದ ದಿ. ಸೀತಾಬಾಯಿ ಹಾಗೂ ಬಸಪ್ಪ ತಿಮಸಾನಿ ಸ್ಮರಣಾರ್ಥ ಹಮ್ಮಿಕೊಂಡಿದ್ದ 23ನೇ ದತ್ತಿ ಉಪನ್ಯಾಸ ಹಾಗೂ ಮಹಾತ್ಮ ಗಾಂಧೀಜಿ ಅವರ 156ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ದಾರ್ಶನಿಕರಾಗಿದ್ದ ಗಾಂಧಿಯವರು ತಮ್ಮ ಕ್ರಿಯಾಶೀಲ ವ್ಯಕ್ತಿತ್ವದಿಂದ ಸಮಾಜದಲ್ಲಿ ಪರಿವರ್ತನೆ ತಂದವರು. ತಮ್ಮ ದೇಹಕ್ಕೆ ತಾವೇ ಶಿಕ್ಷೆ ಕೊಟ್ಟುಕೊಂಡು ಸಮಾಜ ಸುಧಾರಣೆ ಜತೆಗೆ ಪವಿತ್ರವಾದ ಪರಂಪರೆಯನ್ನೂ ಬಿಟ್ಟು ಹೋಗಿದ್ದಾರೆ ಎಂದರು.

ಕಾನಿಪ ಕಸಾಪ ಕಾರ್ಯದರ್ಶಿ ಆನಂದ ಪೂಜಾರಿ ಮಾತನಾಡಿ, ಸ್ವಾತಂತ್ರೃ ಹೋರಾಟಗಾರರಾದ ದಿ. ಸೀತಾಬಾಯಿ ಹಾಗೂ ಬಸಪ್ಪ ತಿಮಸಾನಿ ಗಾಂಧೀಜಿಯವರ ತತ್ವಾದರ್ಶಗಳಲ್ಲಿ ಬದುಕಿದವರು. ಅವರ ತತ್ವಾದರ್ಶಗಳನ್ನು ಇಂದಿನ ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಪತ್ರಕರ್ತ ವೆಂಕಟೇಶ ಗುಡೆಪ್ಪನವರ ಮಾತನಾಡಿ, ಮುಧೋಳ ಮಣ್ಣಿನ ಕಣ ಕಣದಲ್ಲಿ ಸ್ವಾತಂತ್ರೃ ಹೋರಾಟದ ಕಿಚ್ಚು ಹಾಗೂ ದೇಶಪ್ರೇಮವಿದೆ ಎನ್ನುವುದಕ್ಕೆ ಮಂಟೂರಿನ ದಿ. ಸೀತಾಬಾಯಿ ಬಸಪ್ಪ ತಿಮಸಾನಿ ಸಾಕ್ಷಿಯಾಗಿದ್ದಾರೆ. ವಿಜಯಪುರಕ್ಕೆ ಆಗಮಿಸಿದ್ದ ಮಹಾತ್ಮ ಗಾಂಧಿಯವರನ್ನು ಭೇಟಿಯಾಗಿ ತಮ್ಮ ಕೈ, ಕೊರಳಿನಲ್ಲಿದ್ದ ಚಿನ್ನಾಭರಣವನ್ನು ದಾನ ಮಾಡಿದ್ದಲ್ಲದೇ, ಮುಂದೆ ಜೀವನ ಪರ್ಯಂತ ಚಿನ್ನ ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು. ನಂತರ ಅವರ ಮಗ ಮಾಜಿ ಸಂಸದ ದಿ. ಎಸ್.ಟಿ. ಪಾಟೀಲ ಹಾಗೂ ಮೊಮ್ಮಗ ದಯಾನಂದ ಪಾಟೀಲರು ಕೂಡಾ ಚಿನ್ನವನ್ನು ಬಳಸದೆ ಅದೇ ಪರಂಪರೆ ಮುಂದುವರಿಸಿದ್ದಾರೆ ಎಂದರು.

ಕಾನಿಪ ಸಂಘದ ಅಧ್ಯಕ್ಷ ಬಿ. ರತ್ನಾಕರ ಶೆಟ್ಟಿ, ಡಾ. ಶಿವಾನಂದ ಕುಬಸದ, ಡಾ. ಸಿದ್ದು ದಿವಾಣ, ಕಲ್ಲಪ್ಪಣ್ಣ ಸಬರದ, ಸಂಗಮೇಶ ನೀಲಗುಂದಿ ಇತರರಿದ್ದರು. ಹನುಮಂತ ಸೋರಗಾಂವಿ ಹಾಗೂ ಸಂಗಡಿಗರಿಂದ ಗಾಂಧಿ ಭಜನ್ ಗಮನಸೆಳೆಯಿತು. ಅದೃಶ್ಯಪ್ಪ ವಿಜಾಪುರ ಸ್ವಾಗತಿಸಿದರು. ಪಲ್ಲವಿ ನಿರೂಪಿಸಿದರು. ಸುರೇಶ ರಾಜಮಾನೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net