

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ನಗರದ ಕೋರ್ಟ್ ಪಕ್ಕದಲ್ಲಿರುವ ನಗರಸಭೆಯ ಮಹಾತ್ಮ ಗಾಂಧಿ ಉದ್ಯಾನವನ ನೀರಿಲ್ಲದೆ ಸೊರಗುತ್ತಿದ್ದು, ಪಾರ್ಕ್‌ನಲ್ಲಿ ಹಸಿರು ಮಾಯವಾಗಿ ಒಣ ಕಾಡಿನಂತೆ ಭಾಸವಾಗುತ್ತಿದೆ. ಉದ್ಯಾನವನಕ್ಕೆ ಜೀವಕಳೆ ತುಂಬುವಂತೆ ನಾಗರಿಕರು ಒತ್ತಾಯಿಸಿದ್ದಾರೆ.
ಲೋಕೋಪಯೋಗಿ ಇಲಾಖೆ, ತಾಲೂಕು ಆಡಳಿತ ಸೌಧಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ ಮಹಾತ್ಮಗಾಂಧಿ ಹೆಸರಿನಲ್ಲಿ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಇಲ್ಲಿ ಮರಗಿಡಗಳು, ಕುಳಿತುಕೊಳ್ಳುವ ಆಸನ ವ್ಯವಸ್ಥೆ, ಮಕ್ಕಳ ಆಟೋಟದ ಪರಿಕರ, ವ್ಯಾಯಾಮ ಸಲಕರಣೆ ಅಳವಡಿಸಲಾಗಿದೆ. ಜತೆಗೆ ವಾಯು ವಿಹಾರಕ್ಕಾಗಿ ವಿಶೇಷ ನೆಲ ಹಾಸು ಮೂಲಕ ಉತ್ತಮ ಸೌಲಭ್ಯ ಕಲ್ಪಿಸಲಾಗಿದೆ.
ಬೆಳಗಿನಿಂದ ಸಂಜೆವರೆಗೂ ಉದ್ಯಾನವನ ಸದಾ ಚಟುವಟಿಕೆಯಿಂದ ಕೂಡಿರುತ್ತದೆ. ಮುಂಜಾವು ಸಮಯದಲ್ಲಿ ಮಹಿಳೆಯರು, ಮಕ್ಕಳು ಉದ್ಯಾನವನದಲ್ಲಿ ಬಂದು ವಿಶ್ರಾಂತಿ ಪಡೆದು ವ್ಯಾಯಾಮ, ವಾಯುವಿಹಾರ ಮಾಡುತ್ತಾರೆ. ಉದ್ಯಾನವನದ ಸನಿಹದಲ್ಲೇ ಕೋರ್ಟ್, ತಾಲೂಕು ಆಡಳಿತ ಸೌಧ, ಲೋಕೋಪಯೋಗಿ ಇಲಾಖೆ, ಮತ್ತಿತರ ಇಲಾಖೆಗಳು ಇರುವ ಕಾರಣ ಕಚೇರಿ ಕೆಲಸಕ್ಕೆ ಬರುವ ಸಾರ್ವಜನಿಕರು ಉದ್ಯಾನವನದಲ್ಲಿ ವಿಶ್ರಾಂತಿ ಪಡೆಯುವುದೂ ಉಂಟು. ಆದರೆ, ಇಂತಹ ಉದ್ಯಾನವನ ಈಗ ನೀರಿಲ್ಲದೆ ಒಣಗುತ್ತಿದ್ದು, ಮರ ಗಿಡಗಳು ಬಾಡಿ ಹಸಿರು ಮಾಯವಾಗಿ ಒಂದೊಂದಾಗಿ ಕಮರುತ್ತಿವೆ. ಇಡೀ ಉದ್ಯಾನವನ ನೀರಿಲ್ಲದೆ ಬರಡಾಗುತ್ತಿದೆ.
ಬೇಸಿಗೆ ಸಮೀಪಿಸುತ್ತಿದ್ದು, ತಕ್ಷಣಕ್ಕೆ ನೀರುಣಿಸದಿದ್ದರೆ ಇಡೀ ಉದ್ಯಾನವನ ಕೆಲವೇ ದಿನಗಳಲ್ಲಿ ಮೂಲ ಸ್ವರೂಪ ಕಳೆದುಕೊಂಡು, ಮರಗಿಡಗಳು ಅವಸಾನದತ್ತ ಸಾಗಿ, ಇಷ್ಟು ದಿನ ಬೆಳೆಸಿದ ಗಿಡಮರ, ನೆಲಹಾಸಿನ ಹಸಿರು ಮಾಯವಾಗುವುದು ನಿಶ್ಚಿತ. ಉದ್ಯಾನವನ ಜನರಿಂದ ದೂರಾಗುವ ಮೊದಲು ಸೂಕ್ತ ನೀರಿನ ವ್ಯವಸ್ಥೆ ಕಲ್ಪಿಸಿ ಹಸಿರು ಮರುಕಳಿಸುವಂತೆ ಮಾಡಬೇಕಿದೆ.
ಉಪವಿಭಾಗಾಧಿಕಾರಿ ಮನೆ ಆವರಣದಲ್ಲಿರುವ ಬೋರ್‌ವೆಲ್‌ನಿಂದ ಉದ್ಯಾನವನಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಈಗ ಅಲ್ಲೂ ನೀರಿನ ಕೊರತೆ ಉಂಟಾಗಿದೆ. ಜಲಮಂಡಳಿ ಸರಬರಾಜು ಮಾಡುವ ನೀರು 10ರಿಂದ 12 ದಿನಕ್ಕೆ ಹೋಗಿರುವ ಕಾರಣ ಉದ್ಯಾನವನಕ್ಕೆ ನೀರಿನ ಅಲಭ್ಯತೆ ಎದುರಾಗಿದೆ. ಪ್ರಸ್ತುತ ಬೇಸಿಗೆ ಸಮೀಸುತ್ತಿದ್ದು, ಉದ್ಯಾನವನಕ್ಕೆ ಹೆಚ್ಚಿನ ನೀರಿನ ಅವಶ್ಯಕತೆ ಇದೆ.
ಉದ್ಯಾನವನ ಅಭಿವೃದ್ಧಿಗೆ ನಗರಸಭೆ ಅಷ್ಟೇ ಅಲ್ಲದೆ, ನಗರದ ಸಮಾಜ ಸೇವಕರಾದ ಸಿ.ಕೆ. ನಾಗರಾಜು, ರಾಮಣ್ಣ, ಯಾದವ್, ಸಿದ್ದಲಿಂಗಪ್ಪ, ಕೃಷ್ಣಮೂರ್ತಿ ಮತ್ತಿತರ ಪರಿಸರ ಪ್ರೇಮಿಗಳು ಕೂಡ ಗಿಡ ಮರ ಬೆಳೆಸಲು ಶ್ರಮಿಸಿ ಕೆಲವು ದಿನಗಳು ನಿರ್ವಹಣೆ ಮಾಡಿದ್ದಾರೆ. ಜತೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕ್ರೀಡಾ ಪರಿಕರ ಅಳವಡಿಸಿದೆ.
ಉದ್ಯಾನವನಕ್ಕೆ ನೀರಿನ ಕೊರತೆ ಇದೆ. ಹೊಸದಾಗಿ ಬೋರ್‌ವೆಲ್ ಕೊರೆಸುವಂತೆ ನಗರಸಭೆಗೆ ತಿಳಿಸಲಾಗಿದೆ. ಉದ್ಯಾನವನದಲ್ಲಿ ಹಸಿರು ಸದಾ ಕಾಲ ಇರುವಂತೆ ಮಾಡಲು ತಕ್ಷಣಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕೆಂದು ಮಾಡಲಾದ ಮನವಿಗೆ ನಗರಸಭೆ ಆಯುಕ್ತರು ಸ್ಪಂದಿಸಿ ಟ್ಯಾಂಕರ್ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಮಂಜುಳಾ ವೆಂಕಟೇಶ್, ನಗರಸಭೆ ಸದಸ್ಯೆ, 8ನೇ ವಾರ್ಡ್
ಉದ್ಯಾನವನ ನಿರ್ವಹಣೆಗೆ ಸಿಬ್ಬಂದಿ ನೇಮಿಸಲಾಗಿದೆ. ಇಲ್ಲಿರುವ ಬೋರ್‌ವೆಲ್‌ನಲ್ಲಿ ನೀರಿನ ಕೊರತೆ ಎದುರಾಗಿದೆ. ತಕ್ಷಣಕ್ಕೆ ಟ್ಯಾಂಕರ್ ಮೂಲಕ ನೀರೊದಗಿಸುವ ವ್ಯವಸ್ಥೆ ಮಾಡಲಾಗುವುದು. ಹಾಗೆಯೇ, ಶಾಶ್ವತವಾಗಿ ನೀರಿನ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ನಾಗೇಶ್, ಪೌರಾಯುಕ್ತ, ನಗರಸಭೆ, ರಾಮನಗರ