

ಗಣೇಶ್ ಮಾವಂಜಿ ಸುಳ್ಯ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತೋಡಿನ ಹೂಳೆತ್ತುವ ಕೆಲಸ ಹಾಗೂ ಇತರ ಚಿಕ್ಕ ಪುಟ್ಟ ಕೆಲಸ ಮಾಡಿ ಪರಿಣತರಾದ ಮಹಿಳೆಯರು ಈಗ ಶ್ರಮ ಬೇಡುವ ಕಂಗಿನ ಹೊಂಡ ತೆಗೆವ ಕೆಲಸಕ್ಕೂ ಸೈ ಎನ್ನುತ್ತಿದ್ದಾರೆ.
ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಪೆರಾಜೆ, ಕಲ್ಲಡ್ಕ ಭಾಗದ ಸುಮಾರು 27 ಮಹಿಳೆಯರು ಗ್ರಾಮದ ಹಲವು ಕಡೆ ಅಡಕೆ ಸಸಿ ನೆಡುವ ಹೊಂಡ ತೆಗೆದು ಪುರುಷರಿಗೆ ಸರಿಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಜಿಲ್ಲೆಯ ಇತರ ತಾಲೂಕುಗಳಿಗೆ ಹೋಲಿಸಿದರೆ ಮಹಿಳಾ ತೊಡಗಿಸಿಕೊಳ್ಳುವಿಕೆಯಲ್ಲಿ ಸುಳ್ಯ ತಾಲೂಕು ಪ್ರಥಮ ಸ್ಥಾನದಲ್ಲಿದೆ.
ಕಂಗಿನ ಹೊಂಡ ತೆಗೆಯುವುದೆಂದರೆ ಸಾಮಾನ್ಯ ಕೆಲಸವಲ್ಲ. ಪುರುಷರಿಗೂ ಅಸಾಧ್ಯವೇ. ಈ ಕೆಲಸದಲ್ಲಿ ಮಹಿಳೆಯರು ನಿರತರಾಗುವುದು ನಿಜಕ್ಕೂ ಆಶ್ಚರ್ಯ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ದಿನಕ್ಕೆ 289 ರೂ. ಸಂಬಳದಲ್ಲಿ ದುಡಿಯಲು ಪುರುಷರಿಗೆ ಕೂಡಾ ಅವಕಾಶ ಇದೆಯಾದರೂ ಇತರೆಡೆ ಕೆಲಸಕ್ಕೆ ಹೋದರೆ 500 ರೂ. ಮೇಲ್ಪಟ್ಟು ಸಂಬಳ ಇರುವ ಕಾರಣ ಪುರುಷರು ಈ ಯೋಜನೆಯಲ್ಲಿ ಭಾಗವಹಿಸುವ ಸಂಖ್ಯೆ ಕಡಿಮೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಬೀಡಿ ಕಟ್ಟುವ ಕಾಯಕ ಹಾಗೂ ಇತರ ಚಿಕ್ಕ ಪುಟ್ಟ ಕೆಲಸದಲ್ಲಿ ನಿರತರಾಗುವುದಕ್ಕಿಂತ ಸರ್ಕಾರದ ಈ ಯೋಜನೆಯಲ್ಲಿ ಭಾಗವಹಿಸಿದರೆ ಉತ್ತಮ ಎಂಬುದು ಹೆಚ್ಚಿನ ಮಹಿಳೆಯರ ಅಭಿಪ್ರಾಯ. ಹಾಗಾಗಿ, ಇತ್ತೀಚೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯಲ್ಲಿ ಭಾಗವಹಿಸುತ್ತಿದ್ದಾರೆ.
ಮಹಿಳಾ ಕಾಯಕೋತ್ಸವ: ಮಹಿಳಾ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದಾಗಿ ‘ಮಹಿಳಾ ಕಾಯಕೋತ್ಸವ’ ಎಂಬ ಯೋಜನೆಯಡಿ ಮಹಿಳೆಯರ ಮನೆಬಾಗಿಲಿಗೆ ತೆರಳಿ ಜಾಬ್ ಕಾರ್ಡ್ ಮಾಡುವಂತೆ ಪ್ರೇರೇಪಿಸುವ ಕೆಲಸವೂ ಗ್ರಾಮಗಳಲ್ಲಿ ನಡೆಯುತ್ತಿದೆ.
ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಡಕೆ ಬೆಳೆಯುವ ರೈತರಿದ್ದುದರಿಂದ ಅಡಕೆ ಸಸಿ ನೆಡಲು ಗುಂಡಿ ತೋಡುವ ಕೆಲಸದಲ್ಲಿ ನಿರತರಾದರೆ ಹೆಚ್ಚು ದಿನ ಸಿಗುವ ಕಾರಣ ಈ ಕೆಲಸದಲ್ಲಿ ತೊಡಗಿಕೊಂಡೆವು. ಪ್ರಾರಂಭದಲ್ಲಿ ತುಸು ಕಷ್ಟ ಎನಿಸಿದರೂ ಈಗೀಗ ಅಷ್ಟೇನೂ ತ್ರಾಸ ಎನಿಸುವುದಿಲ್ಲ.
-ಪದ್ಮಾವತಿ ಎಂ.ಪಿ, ಯೋಜನೆಯ ಕಾಯಕ ಬಂಧು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತರ ತಾಲೂಕಿಗೆ ಹೋಲಿಸಿದರೆ ಸುಳ್ಯ ತಾಲೂಕಿನಲ್ಲಿ ಅತಿ ಹೆಚ್ಚು ಮಹಿಳೆಯರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದರಲ್ಲೂ ತಾಲೂಕಿನ ಮಂಡಕೋಲು ಹಾಗೂ ಅಮರಮುಡ್ನೂರು ಗ್ರಾಮಗಳಲ್ಲಿ ಶೇ. 64 ಮಹಿಳೆಯರು ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
-ಭವಾನಿಶಂಕರ್, ಕಾರ್ಯನಿರ್ವಹಣಾಧಿಕಾರಿ ತಾಲೂಕು ಪಂಚಾಯಿತಿ, ಸುಳ್ಯ