ವೇತನ ಪಾವತಿಗೆ ಒತ್ತಾಯಿಸಿ ಪ್ರತಿಭಟನೆ

CTD MANJUNATA-NAREGA---
Published on

ಚಿತ್ರದುರ್ಗ: ಕಳೆದ ಆರು ತಿಂಗಳಿಂದ ವೇತನ ಪಾವತಿಸದೇ ಇರುವುದನ್ನು ಖಂಡಿಸಿ ಸೋಮವಾರದಿಂದ ರಾಜ್ಯಾದ್ಯಂತ ನರೇಗಾ ನೌಕರರು ಅಸಹಕಾರ ಚಳವಳಿ ಆರಂಭಿಸಿದ್ದಾರೆ.

ರಾಜ್ಯ ನರೇಗಾ ಕ್ಷೇಮಾಭಿವೃದ್ಧಿ ಸಂಘದ ಕರೆ ಮೇರೆಗೆ ಚಿತ್ರದುರ್ಗ ಜಿಲ್ಲೆಯಲ್ಲೂ ಈ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೊರಸಂಪನ್ಮೂಲ ಆಧರಿಸಿ ಜಿಪಂ, ತಾಪಂ ಮಟ್ಟದ ವಿವಿಧ ಸ್ಥರಗಳಲ್ಲಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಈ ನೌಕರರು ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕುಟುಂಬ ನಿರ್ವಹಣೆ, ದಿನಸಿ ಖರೀದಿ, ಮಕ್ಕಳ ಶಾಲಾ ಪ್ರವೇಶಾತಿ, ಕುಟುಂಬ ಸದಸ್ಯರ ವೈದ್ಯಕೀಯ, ಪ್ರಯಾಣ ವೆಚ್ಚಗಳು, ಸಾಲಗಳ ಮರು ಪಾವತಿ ಇತ್ಯಾದಿ ಖರ್ಚುಗಳನ್ನು ನಿಭಾಯಿಸಲು ಪರದಾಡುವಂತಾಗಿದೆ. ವೇತನವಿಲ್ಲದೆ ಸ್ನೇಹಿತರು, ಸಂಬಂಧಿಕರಲ್ಲಿ ಸ್ವಾಭಿಮಾನ ಅಡವಿಟ್ಟು ಕೈ ಚಾಚುವ ಪರಿಸ್ಥಿತಿ ನಿರ್ಮಾಣವಾಗಿದೆ.

ಖಾಸಗಿ ಲೇವಾದೇವಿದಾರರಿಂದ ಸಾಲ ಮಾಡಿ ಕುಟುಂಬ ನಿರ್ವಹಿಸುವಂಥ ಪರಿಸ್ಥಿತಿ ಎದುರಾಗಿದೆ. ತಕ್ಷಣಕ್ಕೆ ಬಾಕಿ ಸಹಿತ ಸಕಾಲದಲ್ಲಿ ವೇತನ ಪಾವತಿಯಾಗದಿದ್ದರೆ ನೌಕರರ ಆರ್ಥಿಕ ಪರಿಸ್ಥಿತಿ, ಮನೋಬಲ,ಆತ್ಮಸ್ಥೆರ್ಯ ಮತ್ತಷ್ಟು ಕುಸಿಯಲಿದೆ. ವೇತನ ಬಾಕಿಗೆ ಕೇಂದ್ರದಿಂದ ಅನುದಾನ ಬರದಿರುವುದು ಕಾರಣವೆಂದು ಇಲ್ಲಿಯವರೆಗೂ ಮೇಲಧಿಕಾರಿಗಳು ಮಾಹಿತಿ ನೀಡಿದ್ದರು.

ಪ್ರಸ್ತುತ ಕೇಂದ್ರದಿಂದ ರಾಜ್ಯಕ್ಕೆ, ರಾಜ್ಯದಿಂದ ಜಿಲ್ಲಾ ಕೇಂದ್ರಕ್ಕೆ ಅನುದಾನ ಬಿಡುಗಡೆಯಾಗಿದೆ ಎಂದು ಈಗ ತಿಳಿಸಿದ್ದಾರೆ. ಆದರೆ ಹೊಸ ತಂತ್ರಾಂಶದಲ್ಲಿ ಎದುರಾಗಿರುವ ತಾಂತ್ರಿಕ ಸಮಸ್ಯೆಯಿಂದ ವೇತನ ಪಾವತಿ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಸಹಕಾರ ಚಳವಳಿ ಆರಂಭಿಸಿರುವುದಾಗಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net