

ವಿಜಯಪುರ: ಮಹಾತ್ಮ ಗಾಂಧಿ ಭಾರತದ ರಾಷ್ಟಪಿತ ಅಲ್ಲ; ಪಾಕಿಸ್ತಾನದ ರಾಷ್ಟ್ರಪಿತ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ಮಹಾತ್ಮ ಗಾಂಧಿ ಹುಟ್ಟಿಸಿರುವ ಕೂಸೇ ಪಾಕಿಸ್ತಾನ. ಮುಸ್ಲಿಮರಿಗಾಗಿ ಪಾಕಿಸ್ತಾನ ಕೊಟ್ಟಿದ್ದಾರೆ. ಆದರೆ, ಅಲ್ಲಿ ಒಂದೇ ಒಂದು ಗಾಂಧಿ ಮೂರ್ತಿ ಸಹ ಇಲ್ಲ. ದೇಶ ಒಡೆದವರ ಮೂರ್ತಿಯನ್ನು ಇಲ್ಲಿ ಊರಿಗೆ, ಓಣಿಗೆ ಕೊಡಿಸುತ್ತೇವೆ ಎಂದು ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬಾಬಾಸಾಹೇಬ ಅಂಬೇಡ್ಕರ್ ಸಹ ದೇಶ ವಿಭಜನೆಗೆ ವಿರೋಧಿಸಿದ್ದರು. ವಲ್ಲಭಭಾಯಿ ಪಟೇಲ್ ಕೂಡ ವಿರೋಧಿಸಿದ್ದರು. ಗಾಂಧಿ ಅವರನ್ನು ಮಹಾತ್ಮ, ರಾಷ್ಟಪಿತ ಎಂದು ಕರೆಯಬೇಡಿ. ಈ ಪದಗಳಿಗೆ ಅವರು ಯೋಗ್ಯರಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಅಲ್ಲದೇ, ದೇಶ ಧರ್ಮಾಧಾರಿತ ವಿಭಜನೆ ಮಾಡಿದರೆ, ಪಾಕಿಸ್ತಾನದ ಕಟ್ಟಕಡೆಯ ಹಿಂದೂ ಸಹ ಭಾರತಕ್ಕೆ ಬರಬೇಕು. ಭಾರತದ ಕಟ್ಟಕಡೆಯ ಮುಸ್ಲಿಂ ಪಾಕಿಸ್ತಾನಕ್ಕೆ ಹೋಗಬೇಕು ಎಂದೂ ಅಂಬೇಡ್ಕರ್ ಹೇಳಿದ್ದರು ಎಂದು ಯತ್ನಾಳ ತಿಳಿಸಿದರು.
ಇಸ್ಲಾಂನಲ್ಲಿ ಮತ್ತೊಂದು ಧರ್ಮದವರನ್ನು ಸಹೋದರ ಭಾವದಿಂದ ನೋಡುವುದಿಲ್ಲ. ಜತೆಗೆ ಯಾವುದೇ ರಾಷ್ಟಕ್ಕೆ ಅವರು ನಿಷ್ಠೆ ಇರಲ್ಲ. ತಮ್ಮ ಇಸ್ಲಾಂ ಧರ್ಮವೇ ಶ್ರೇಷ್ಠ ಎನ್ನುತ್ತಾರೆ ಎಂಬುದನ್ನೂ ಅಂಬೇಡ್ಕರ್ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ ಎಂದು ಯತ್ನಾಳ ತಿಳಿಸಿದರು.
ಇನ್ನು ಬಿಜೆಪಿಗೆ ಯತ್ನಾಳ ಯಾವತ್ತೂ ಮರಳಿ ಬರಲ್ಲ ಎಂಬುದು ಕೆಲವರ ಭ್ರಮೆಯಾಗಿದೆ. ಕೇಂದ್ರದ ನಾಯಕರು ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿ ಆಗ ಗೊತ್ತಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಇನ್ನು ಯುದ್ದ ವಿರಾಮಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಯತ್ನಾಳ, ನೆಹರು ಹಾಗೂ ಗಾಂಧಿ ಮಾಡಿದ ತಪ್ಪನ್ನು ಮೋದಿ ಯಾವತ್ತಿಗೂ ಮಾಡಬಾರದು. ಭಾರತದ ಸೈನ್ಯವಿಂದು ಬಲಿಷ್ಠವಾಗಿದೆ. ಈ ಹಿಂದೆ ಶಿಮ್ಲಾ ಒಪ್ಪಂದದಿಂದಾಗಿ ಭಾರತಕ್ಕೆ ಬಹುದೊಡ್ಡ ಹಾನಿಯಾಯಿತು. ಅಂಥ ತಪ್ಪು ಮರುಕಳಿಸಬಾರದು ಎಂದರು.