

ವಿಜಯವಾಣಿ ಸುದ್ದಿಜಾಲ ತುಮಕೂರು
ಅಹಿಂಸೆ, ಶಾಂತಿ ಮಾರ್ಗದಿಂದ ಸ್ವಾತಂತ್ರ್ಯ ಗಳಿಸಬಹುದು ಎಂಬುದನ್ನು ಗಾಂಧೀಜಿ ವಿಶ್ವಕ್ಕೆ ತೋರಿಸಿಕೊಟ್ಟ ಮಹಾತ್ಮ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ ಸಚಿವ ಡಾ. ಜಿ.ಪರಮೇಶ್ವರ ಬಣ್ಣಿಸಿದರು. ನಗರದ ಅಮಾನಿಕೆರೆ ಉದ್ಯಾನವನದಲ್ಲಿ ಮಹಾನಗರ ಪಾಲಿಕೆಯಿಂದ ನಿರ್ಮಿಸಿರುವ ಗ್ಯಾರಾಮೂರ್ತಿ ಕಲಾಕೃತಿಯನ್ನು ಉದ್ಘಾಟಿಸಿ ಮಾತನಾಡಿ, ಜಗತ್ತಿನ ಹಲವಾರು ದೇಶಗಳು ಮಹಾತ್ಮ ಗಾಂಧಿ ಅವರ ಆದರ್ಶಗಳನ್ನು ಒಪ್ಪಿ, ಅಳವಡಿಸಿಕೊಂಡಿವೆ. ಇದಕ್ಕೆ ಸಾಕ್ಷಿಯಾಗಿ ಪ್ರಪಂಚದ ಬಹುತೇಕ ಎಲ್ಲ ದೇಶಗಳಲ್ಲಿ ಗಾಂಧಿ ಪ್ರತಿಮೆಗಳನ್ನು ಕಾಣಬಹುದಾಗಿದೆ. ಆಫ್ರಿಕಾವನ್ನು ಸ್ವತಂತ್ರಗೊಳಿಸುವಲ್ಲಿ ನೆಲ್ಸನ್ ಮಂಡೇಲಾ ಅವರಿಗೆ ಗಾಂಧಿ ಅವರ ಆದರ್ಶಗಳೇ ಪ್ರೇರಣೆಯಾಗಿದ್ದವು. ಗಾಂಧಿ ಭಾರತದ ಶಕ್ತಿಯಾಗಿದ್ದರು ಎಂದರು.
ಅಮಾನಿಕೆರೆಯ ಗ್ಯಾರಾಮೂರ್ತಿ (ಹನ್ನೊಂದು ಮೂರ್ತಿ) ದೇಶದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಚಳವಳಿಯಾದ "ದಂಡಿಯಾತ್ರೆ' ಅಥವಾ "ಉಪ್ಪಿನ ಸತ್ಯಾಗ್ರಹ'ವನ್ನು ಬಿಂಬಿಸುವ ಕಲಾಕೃತಿಯಾಗಿದೆ. ಈ ದಿನ ಗಾಂಧಿ ಜಯಂತಿಯೊಂದಿಗೆ ಮತ್ತೊಬ್ಬ ದೇಶದ ಮಹಾನ್ ನಾಯಕ ಲಾಲ್ ಬಹಾದೂರ್ ಶಾಸ್ತ್ರೀಜಿ ಅವರ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಶಾಸ್ತ್ರೀಜಿ ಅವರ ತತ್ವಾದರ್ಶಗಳನ್ನು ನಮ್ಮ ಮಕ್ಕಳಿಗೆ ಪರಿಚಯಿಸಬೇಕು. ಅವರು ದೇಶದ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದ ಚರಿತ್ರೆಯನ್ನು ನಾವೆಂದೂ ಮರೆಯದೆ ಮುಂದಿನ ಪೀಳಿಗೆಗೆ ತಿಳಿಸಬೇಕಿದೆ. ದೇಶದ ಸ್ವಾತಂತ್ರ್ಯ, ಸಮಾನತೆಯ ಬದುಕನ್ನು ಕಟ್ಟಿಕೊಳ್ಳಲು ಹೋರಾಡಿ ತ್ಯಾಗ-ಬಲಿದಾನ ಮಾಡಿದವರನ್ನು ನಾವಿಂದು ಸ್ಮರಿಸಬೇಕೆಂದು ತಿಳಿಸಿದರು.
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಮಾತನಾಡಿ, ಸ್ವಚ್ಛ ಭಾರತ ಗಾಂಧೀಜಿ ಕನಸಾಗಿತ್ತು. ಗಾಂಧಿ ಕನಸನ್ನು ನನಸಾಗಿಸಲು ಕೇಂದ್ರ ಸರ್ಕಾರದಿಂದ ದೇಶದಾದ್ಯಂತ ಹಮ್ಮಿಕೊಂಡಿರುವ ಸ್ವಚ್ಛ ಭಾರತ್ ಅಭಿಯಾನ ಕಾರ್ಯಕ್ರಮ ಯಶಸ್ವಿಯಾಗಿದೆ. ವಿಶ್ವದ ಭೂಪಟದಲ್ಲಿ ದೇಶದ ಹೆಸರನ್ನು ಗುರುತಿಸುವಂತೆ ಮಾಡಿರುವ ಗಾಂಧಿ, ಲಾಲ್ಬಹದ್ದೂರ್ ಶಾಸ್ತ್ರಿಯವರಂತಹ ಸಾಧಕರ ಮಾರ್ಗದಲ್ಲಿ ನಮ್ಮ ಮಕ್ಕಳು ನಡೆಯುವಂತಾಗಬೇಕು ಎಂದು ಹೇಳಿದರು.
ಮಾಜಿ ಸೈನಿಕರಾದ ಸುಬೇದಾರ್ ಬಿ.ಲಿಂಗಣ್ಣ, ಸಾರ್ಜೆಂಟ್ ಸಿ.ಪಾಂಡುರಂಗ, ಹವಾಲ್ದಾರರಾದ ಪ್ರಸನ್ನಕುಮಾರ್, ನವೀನ್, ಗಂಗಯ್ಯ, ವಿ.ಡಿ. ನಾಗರಾಜು, ಪುಟ್ಟ ಬಾಲಯ್ಯ, ರಾಜಣ್ಣ, ರಾಜಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್ಗೌಡ, ಡಿಸಿ ಶುಭಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ಎಸ್ಪಿ ಅಶೋಕ್, ಎಡಿಸಿ ಡಾ.ತಿಪ್ಪೇಸ್ವಾಮಿ ಇದ್ದರು.
ಬದಲಾವಣೆ ಸಂಕೇತ
ಅಮಾನಿಕೆರೆ ಅಂಗಳದಲ್ಲಿ ಗ್ಯಾರಾಮೂರ್ತಿ ಕಲಾಕೃತಿ ನಿಮಾರ್ಣ ತುಮಕೂರು ಬದಲಾಗುತ್ತಿರುವುದರ ಸಂಕೇತವಾಗಿದೆ. ಜಿಲ್ಲೆ ಬೆಂಗಳೂರಿನ ಭಾಗವಾಗಿ ಬೆಳೆಯುತ್ತಿದೆ. ಸಬ್ ಅರ್ಬನ್ ರೈಲು, ಮೆಟ್ರೋ ರೈಲು ತುಮಕೂರಿಗೆ ಬರಲಿದೆ. ವಸಂತನರಸಾಪುರದಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ನಿಮಾರ್ಣ ಆಗುತ್ತಿರುವುದರಿಂದ ಮೆಟ್ರೋ ರೈಲನ್ನು ವಸಂತನರಸಾಪುರದವರೆಗೂ ಕೊಂಡೊಯ್ಯಲು ಚಿಂತನೆ ನಡೆಸಲಾಗಿದೆ ಎಂದು ಜಿ. ಪರಮೇಶ್ವರ ತಿಳಿಸಿದರು. ಕೇಂದ್ರ ಸಚಿವರು ಆದ ಸ್ಥಳಿಯ ಸಂಸದ ವಿ.ಸೋಮಣ್ಣ ಹಾಗೂ ನಾನು ಇಬ್ಬರೂ ಸೇರಿ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಪಕ್ಷಭೇದವಿಲ್ಲದೆ ಒಟ್ಟಾಗಿ ಶ್ರಮಿಸುತ್ತೇವೆ. ನಗರದ 2 ಕಡೆ ಬೃಹತ್ ಸ್ವಾಗತ ಕಮಾನು ನಿಮಾರ್ಣ ಮಾಡಲು ಉದ್ದೇಶಿಸಿದ್ದು, ಈಗಾಗಲೇ ಡಿಪಿಆರ್ ಸಿದ್ಧಪಡಿಸಲಾಗಿದೆ ಎಂದರು.
ಕಲಾಕೃತಿಯ ವಿಶೇಷ
ಗ್ಯಾರಾ ಮೂರ್ತಿ(ಹನ್ನೊಂದು ಮೂರ್ತಿ) ಎಂಬುದು ದೇಶದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಚಳವಳಿಯಾದ "ದಂಡಿಯಾತ್ರೆ' ಅಥವಾ ಉಪ್ಪಿನ ಸತ್ಯಾಗ್ರಹವನ್ನು ಬಿಂಬಿಸುವ ಕಲಾಕೃತಿಯಾಗಿದೆ. ಈ ಗ್ಯಾರಾಮೂರ್ತಿಯ ಕಲಾಕೃತಿಯ ಪ್ರತಿರೂಪವನ್ನು ಸ್ಥಾಪಿಸಲಾಗಿದ್ದು, ಆಕೃತಿಯು ಒಟ್ಟು 50 ಅಡಿ ಉದ್ದ ಹಾಗೂ ಸರಾಸರಿ 10 ಅಡಿ ಎತ್ತರವಿದೆ. ಸಮಾಜದ ವಿವಿಧ ವರ್ಗ ಸಮುದಾಯ ಹಾಗೂ ಆರ್ಥಿಕ ಹಿನ್ನೆಲೆಯುಳ್ಳ ಹತ್ತು ಮಂದಿ ಹಿಂಬಾಲಿಸುತ್ತಿರುವುದನ್ನು ಈ ಕಲಾಕೃತಿಯು ಬಿಂಬಿಸುತ್ತದೆ. ಭಾರತದ ಸ್ವಾತಂತ್ರ್ಯದ 25ನೇ ವರ್ಷದ ನೆನಪಿನಲ್ಲಿ ಮೊದಲ ಬಾರಿಗೆ 1972ರಲ್ಲಿ ಈ ಕಲಾಕೃತಿಯನ್ನು ನವದೆಹಲಿಯಲ್ಲಿ ಸ್ಥಾಪಿಸಲಾಯಿತು. ಶ್ರೀ ದೇವಿಪ್ರಸಾದ್ ಚೌಧರಿ ಅವರು ಈ ಕಲಾಕೃತಿಯ ಸೃಷ್ಟಿಕರ್ತರು. ಜಾತಿ, ಧರ್ಮ, ಭಾಷೆ, ಆರ್ಥಿಕ ಸ್ಥಿತಿ ಹಾಗೂ ಇತರ ಎಲ್ಲ ವ್ಯತ್ಯಾಸಗಳಿದ್ದರೂ ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ಎಲ್ಲರೂ ಒಂದಾಗಿ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿರುವುದನ್ನು ಈ ಕಲಾಕೃತಿಯು ಬಿಂಬಿಸುತ್ತದೆ.‘