

ಕೊಪ್ಪಳ:ಜಗತ್ತಿನ ಶ್ರೇಷ್ಠ ಕಾವ್ಯ ರಾಮಾಯಣ ಬರೆದ ಕವಿ ಮಹರ್ಷಿ ವಾಲ್ಮೀಕಿ. ಇಂದಿಗೂ ರಾಮಾಯಣ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದಿಂದ ಶನಿವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶದ ಸಂಸ್ಕೃತಿಯನ್ನು ರಾಮಾಯಣ ಜಗತ್ತಿಗೆ ಪತಿಚಯಿಸಿದೆ. ಇದಕ್ಕೆ ಕಾರಣ ವಾಲ್ಮೀಕಿ. ಅವರನ್ನು ಎ?್ಟು ನೆನೆದರೂ ಕಡಿಮೆಯೇ. ದೇಶದ ಸ್ವಾತಂತ್ರ್ಯ ಹೋರಾಟ, ದೇಶ ಕಟ್ಟುವಲ್ಲಿ ನಾಯಕ ಸಮುದಾಯದ ಕೊಡುಗೆ ಅಪಾರ.
ಸಮುದಾಯ ಅಭಿವೃದ್ಧಿಗೆ ಶಿಕ್ಷಣಕ್ಕೆ ಮಹತ್ವ ನೀಡಬೇಕು. ಶಿಕ್ಷಣವಂತರಾದಾಗ ಮಾತ್ರ ಸಮಾಜದಲ್ಲಿ ಮುಂದೆ ಬರಲು ಸಾಧ್ಯ. ನಿಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಎಂದು ಕರೆ ನೀಡಿದರು.
ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ವಾಲ್ಮೀಕಿ ರಾಮನ ಇತಿಹಾಸವನ್ನು ಜಗತ್ತಿಗೆ ತಿಳಿಸಿದವರು. ಸಮುದಾಯ ಅಕ್ಷರ ಸಂಸ್ಕೃತಿಯಿಂದ ದೂರವಿದೆ. ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾದರೂ ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ. ಅದು ಸರಿಯಾಗಬೇಕು.
ಅಸಮಾನತೆ ಗುರುತಿಸಲು ಸಿಎಂ ಸಿದ್ದರಾಮಯ್ಯ ಸಾಮಾಜಿಕ, ಆರ್ಥಿಕ, ಜಾತಿವಾರು ಜನಗಣತಿ ಮಾಡಿಸಿದ್ದಾರೆ. ಹಿಂದುಳಿದವರ ಕಲ್ಯಾಣಕ್ಕಾಗಿ ಯೋಜನೆ ರೂಪಿಸಿದ್ದಾರೆ. ಜಿಲ್ಲಾ ವಾಲ್ಮೀಕಿ ಸಮುದಾಯ ಭವನಕ್ಕೆ 1.5 ಕೋಟಿ ರು. ಅನುದಾನ ನೀಡಲಾಗಿದೆ.
ಇನ್ನು 1.5 ಕೋಟಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ವಾಲ್ಮೀಕಿ ಅವರು ತಮ್ಮ ಕಾವ್ಯದಲ್ಲಿ ಸಮಾನತೆ ಸಾರಿದ್ದಾರೆ. ಅವರು ಹೇಳಿದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೊಣ ಎಂದರು.
ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಆದಿಕವಿ ವಾಲ್ಮೀಕಿ ಮಹರ್ಷಿಗಳ ಕೊಡುಗೆ ಅಪಾರ. ಅವರ ಆಶೀರ್ವಾದದಿಂದ ನಾನು ಇಂದು ಈ ಸ್ಥಾನದಲ್ಲಿದ್ದೇನೆ. ಮಕ್ಕಳಿಗೆ ಶಿಕ್ಷಣ ನೀಡಿ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಡಿ. ಇದರಿಂದ ಸಮುದಾಯ ಬೆಳೆಯಲು ಸಹಕಾರಿಯಾಗಲಿದೆ.
ಬಾಲ್ಯವಿವಾಹ ಮಾಡಬೇಡಿ. ಸರ್ಕಾರ ಸಾಕಷ್ಟು ಸೌಲಭ್ಯ ಕಲ್ಪಿಸಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಎಸ್ಟಿ ಹಾಸ್ಟೆಲ್ ಗಳ ಸಂಖ್ಯೆ ಕಡಿಮೆ ಇದೆ. ವಿದ್ಯಾರ್ಥಿಗಳು ಹೆಚ್ಚಿದ್ದಾರೆ.
ಅವರೆಲ್ಲರಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪಿಸಬೇಕು. ಶಾಸಕರು ಈ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಚಿಂತಕ ಡಾ.ಎ.ಬಿ.ರಾಮಚಂದ್ರಪ್ಪ ವಿಶೇ? ಉಪನ್ಯಾಸ ನೀಡಿದರು. ವಿವಿಧ ರಂಗದಲ್ಲಿ ಸಾಧನೆ ಮಾಡಿದ ಸಮುದಾಯದ ಗಣ್ಯರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ನಗರಸಭೆ ಅಧ್ಯಕ್ಷೆ ಶಿವಗಂಗಾ ಭೂಮಕ್ಕನವರ, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಸ್ಪಿ ಯಶೋದಾ ವಂಟಗೋಡಿ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ತಹಸೀಲ್ದಾರ್ ವಿಠ್ಠಲ ಚೌಗಲಾ, ನಗರಸಭೆ ಸದಸ್ಯರಾದ ಗುರುರಾಜ ಹಲಗೇರಿ,
ಮುತ್ತು ಕುಷ್ಟಗಿ ವಿರುಪಾಕ್ಷಪ್ಪ ಮೋರನಾಳ, ಸಮುದಾಯದ ಪ್ರಮುಖರಾದ ಟಿ.ರತ್ನಾಕರ, ಇಂದಿರಾ ಬಾವಿಕಟ್ಟಿ, ಸುರೇಶ್ ಡೊಣ್ಣಿ, ಗೀತಾ ಪಾಟೀಲ್, ಶರಣಪ್ಪ ಇತರರಿದ್ದರು.