ಬಾಳೆಹೊನ್ನೂರಿನಲ್ಲಿ ಸಂಭ್ರಮದ ಮಹಾಶಿವರಾತ್ರಿ

26bhr 2 (2)
Published on

ಬಾಳೆಹೊನ್ನೂರು: ಪಟ್ಟಣ ಹಾಗೂ ಹೋಬಳಿಯಾದ್ಯಂತ ಬುಧವಾರ ಮಹಾ ಶಿವರಾತ್ರಿಯನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.

ಶಿವರಾತ್ರಿ ಪ್ರಯುಕ್ತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಏಕದಶವಾರ ರುದ್ರಾಭಿಷೇಕ, ಅರ್ಚನೆ, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲಾಯಿತು. ಮಾರ್ಕಾಂಡೇಶ್ವರ ದೇವಸ್ಥಾನ, ರಂಭಾಪುರಿ ಪೀಠದ ವೀರಭದ್ರೇಶ್ವರ, ಸೋಮೇಶ್ವರ ದೇವಾಲಯ, ಇಟ್ಟಿಗೆ ಸೀಗೋಡು ಬಿಜಿಎಸ್ ಕ್ಯಾಂಪಸ್‌ನ ಈಶ್ವರ, ಗಡಿಗೇಶ್ವರ ಭವಾನಿ ಶಂಕರೇಶ್ವರ, ಮಾಗುಂಡಿ ಮಲ್ಲಿಕಾರ್ಜುನ ಸ್ವಾಮಿ, ಆಯೂರು ಈಶ್ವರ, ಹುಣಸೇಕೊಪ್ಪ ಈಶ್ವರ, ಮುದುಗುಣಿ ಶಿವಗಂಗಾ, ಭೈರೇಗುಡ್ಡದ ಕಾಲಭೈರವೇಶ್ವರ ಹಾಗೂ ಖಾಂಡ್ಯ ತ್ರಯಂಬಕ ಮಾರ್ಕಾಂಡೇಶ್ವರ ದೇವಸ್ಥಾನಗಳಲ್ಲಿ ಶಿವನಿಗೆ ವಿಶೇಷ ರುದ್ರಾಭಿಷೇಕ ನೆರವೇರಿಸಲಾಯಿತು.

ಶಿವಾಲಯಗಳ ಮುಂಭಾಗ ಅಕ್ಕಿ ಹಾಗೂ ಭತ್ತವನ್ನಿಟ್ಟು ಅದರ ಮೇಲ್ಭಾಗದಲ್ಲಿ ಕುಂಬಳಕಾಯಿ ಕಡಿದು ಎಳ್ಳೆಣ್ಣೆ, ಎಳ್ಳು ಹಾಕಿ ದೀಪ ಹಚ್ಚಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹಾಗೂ ದೋಷ ನಿವಾರಣೆಗೆ ಹರಕೆ, ಪ್ರಾರ್ಥನೆ ಸಲ್ಲಿಸಿದರು.

ಮಾರ್ಕಾಂಡೇಶ್ವರ ದೇವಾಲಯದಲ್ಲಿ ಮುಂಜಾನೆ ನಾಲ್ಕು ಗಂಟೆಯಿಂದಲೇ ನಿರಂತರವಾಗಿ ಅಭಿಷೇಕ ನಡೆಯಿತು. ಪಟ್ಟಣದ ಮಾರ್ಕಾಂಡೇಶ್ವರ ಹಾಗೂ ಖಾಂಡ್ಯ ಮಾರ್ಕಾಂಡೇಶ್ವರ ದೇವಸ್ಥಾನಗಳಲ್ಲಿ ದರ್ಶನಕ್ಕಾಗಿ ಭಕ್ತರು ಸಾಲುಗಟ್ಟಿ ನಿಂತಿದ್ದರು. ಹಲವೆಡೆ ರಾತ್ರಿ, ಶಿವರಾತ್ರಿ ಜಾಗರಣೆ ಆಚರಣೆಗೆ ಸಿದ್ಧತೆಗಳು ಭರದಿಂದ ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net