

ಮಡಿಕೇರಿ: ಮಡಿಕೇರಿ ನಗರದ ದಾಸವಾಳ ಬಡಾವಣೆಯಲ್ಲಿರುವ ಶ್ರೀವೀರಭದ್ರ ಮುನೇಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಮಹಾಶಿವರಾತ್ರಿ ಮಹೋತ್ಸವವು ಮಾ.೮ ರಂದು ನಡೆಯಲಿದೆ.
ಅಂದು ಬೆಳಿಗ್ಗೆ ೭ ಗಂಟೆಗೆ ಮಹಾಗಣಪತಿ ಹೋಮ ನಡೆಯಲಿದ್ದು, ೯ ಗಂಟೆಗೆ ವೀರಭದ್ರ ಉತ್ಸವ ಮೂರ್ತಿಯ ಮೆರವಣಿಗೆ ನಗರದ ಗಣಪತಿ ಬೀದಿಯಿಂದ ಬನ್ನಿಮಂಟಪ, ಮಹದೇವಪೇಟೆ, ಖಾಸಗಿ ಬಸ್ ನಿಲ್ದಾಣ ವೃತ್ತದಿಂದ ಜೂನಿಯರ್ ಕಾಲೇಜು ರಸ್ತೆ ಮಾರ್ಗವಾಗಿ ದೇವಾಲಯಕ್ಕೆ ಸಾಗಲಿದೆ.
ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ ನಡೆಯಲಿದ್ದು, ಮಧ್ಯಾಹ್ನ ೧ ಗಂಟೆಗೆ ಭಕ್ತಾಧಿಗಳಿಗೆ ಅನ್ನಸಂತರ್ಪಣೆಯಾಗಲಿದೆ. ಸಂಜೆ ೬ ರಿಂದ ಮರುದಿನ ಬೆಳಿಗ್ಗೆ ೫ ಗಂಟೆಯವರೆಗೆ ಜಾಮಪೂಜೆ ಜರುಗಲಿದೆ.
ಸಂಜೆ ೭ ಗಂಟೆಗೆ ಮಹಾ ಮೃತ್ಯುಂಜಯ ಹೋಮ ಹಾಗೂ ದೀಪಾರಾಧನೆ ನಡೆಯಲಿದ್ದು, ಜಾಗರಣೆ ಪ್ರಯುಕ್ತ ರಾತ್ರಿ ೧೦ ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು ಮನವಿ ಮಾಡಿದ್ದಾರೆ.