

ಕೂಡ್ಲಿಗಿ: ಇಂದಿನ ಒತ್ತಡದ ಜೀವನದಲ್ಲಿ ಮನಸ್ಸಿಗೆ ಶಾಂತಿ ನೆಮ್ಮದಿ ಪಡೆಯಲು ದೇವರು ಮತ್ತು ಧರ್ಮದ ಮಾರ್ಗದ ಜತೆಗೆ ಜ್ಞಾನದ ಮಾರ್ಗವೂ ಅಗತ್ಯವಿದೆ ಎಂದು ಕೂಡ್ಲಿಗಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿ ಸಂಚಾಲಕಿ ಚಂದ್ರಕಲಾ ಅಕ್ಕ ಹೇಳಿದರು.
ಶಿವರಾತ್ರಿ ಪ್ರಯುಕ್ತ ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಿವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಧನಾತ್ಮಕ ಆಲೋಚನೆ ಮೈಗೂಡಿಸಿಕೊಂಡು ಕೆಟ್ಟ ಯೋಚನೆ ಹಾಗೂ ಸ್ವಾರ್ಥ ಬದಿಗೊತ್ತುವ ಮೂಲಕ ಇತರರಿಗೆ ಮಾದರಿಯಾಗಿ ಜೀವನ ನಡೆಸಬೇಕು. ಮನಸ್ಸನ್ನು ಕೇಂದ್ರೀಕರಿಸಿ ಆಸೆ-ಲಾಲಸೆಗಳನ್ನು ಬಿಟ್ಟು ಧ್ಯಾನಾಸಕ್ತನಾಗಿ ಪರಮಾತ್ಮನನ್ನು ಭಜಿಸಬೇಕು. ಇದರಿಂದ ನೆಮ್ಮದಿ ಸಿಗುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಎಲ್ಲರೂ ಶಿವನನ್ನು ಸ್ತುತಿಸಿ ಆತನ ಮಾರ್ಗದಂತೆ ನಡೆಯಬೇಕಾಗಿದೆ ಎಂದರು.
ಇದಕ್ಕೂ ಮುನ್ನ ಶಿವಧ್ವಜಾರೋಹಣ ನೆರವೇರಿಸಲಾಯಿತು. ನಂತರ ಪಟ್ಟಣದ ಬಸವಲಿಂಗೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ದ್ವಾದಶ ಲಿಂಗಗಳ ಮೆರವಣಿಗೆ ನಡೆಸಲಾಯಿತು. ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯದ ಪ್ರಾಚಾರ್ಯ ಕನ್ನಿಹಳ್ಳಿ ನಾಗರಾಜ್, ಈಶ್ವರೀಯ ವಿವಿಯ ಶಶಿಕಲಾ ಅಕ್ಕ, ಎಸ್.ವಿ.ಸಿದ್ಧಾರಾಧ್ಯ, ಮಲ್ಲಿಕಾರ್ಜುನ ಎಸ್., ಖಾನಾವಳಿ ಕೊಟ್ರೇಶಪ್ಪ, ಎಸ್.ವಿರೂಪಾಕ್ಷ ಮೂರ್ತಿ, ಶಿಕ್ಷಕ ಹಂಚಿನಾಳ್, ಎಚ್.ಪಿ.ಶಿಲ್ಪಾ, ವಸಂತ ಕುಮಾರಿ, ಮೂಗಮ್ಮ, ಅಂಬಿಕಾ ಇತರರಿದ್ದರು.