ಎಲ್ಲೆಲ್ಲೂ ಅನುರಣಿಸಿದ ಓಂ ನಮ ಶಿವಾಯ

000
Published on

ಜಿಲ್ಲೆಯಲ್ಲಿ ಕಳೆಗಟ್ಟಿದ ಶಿವರಾತ್ರಿ ಸಂಭ್ರಮ

ಕೋಲಾರ: ನಗರ ಸೇರಿ ಜಿಲ್ಲೆಯ ಗ್ರಾಮೀಣ ಭಾಗದಲ್ಲೂ ಮಹಾಶಿವರಾತ್ರಿ ಸಂಭ್ರಮ ಬುಧವಾರ ಕಳೆಗಟ್ಟಿತ್ತು. ವಿವಿಧ ದೇವಾಲಯಗಳಲ್ಲಿ ಶಿವನ ನಾಮಸ್ಮರಣೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ಮಹಿಳೆಯರು ಮುಂಜಾನೆಯೇ ಮನೆ ಮುಂದೆ ಬಣ್ಣಬಣ್ಣದ ರಂಗೋಲಿ ಬಿಡಿಸಿ, ಅಂಗಳವನ್ನು ಚಿತ್ತಾರಗೊಳಿಸಿದ್ದರು. ಬಾಗಿಲಿಗೆ ತಳಿರು ತೋರಣ ಕಟ್ಟಿ, ಹೂವುಗಳಿಂದ ಸಿಂಗರಿದ್ದರು.

ಶಿವಾಲಯಗಳಲ್ಲಿ ಇಡೀ ದಿನ ಶಿವನಾಮ ಸ್ಮರಣೆ, ಭಜನೆ ಹಮ್ಮಿಕೊಳ್ಳಲಾಗಿತ್ತು. ವಿಶೇಷಪೂಜೆ, ರುದ್ರಾಭಿಷೇಕ, ಸಹಸ್ರ ನಾವಾರ್ಚನೆ, ಬಿಲ್ವಾರ್ಚನೆ, ಹೋಮ-ಹವನಗಳು ನೆರವೇರಿದವು. ಜಾಗರಣೆ ಪ್ರಯುಕ್ತ ದೇವಾಲಯಗಳನ್ನು ಸಿಂಗರಿಸಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕೆಲ ಗ್ರಾಮಗಳಲ್ಲಿ ಹೊನಲು ಬೆಳಕಿನ ಕಬಡ್ಡಿ ಸೇರಿ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

ತಾಲೂಕಿನ ವಕ್ಕಲೇರಿ ವಾರ್ಕಂಡೇಯ ಈಶ್ವರ ದೇವಾಲಯ, ನಗರದ ಕೋಟೆ ಬಡಾವಣೆಯ ಸೋಮೇಶ್ವರ, ಕೊರಗಂಡಹಳ್ಳಿ ಕಾಶಿವಿಶ್ವನಾಥ ದೇವಾಲಯ, ದಕ್ಷಿಣಕಾಶಿ ವಿಶ್ವೇಶ್ವರ ದೇವಾಲಯ, ಕಾಳಮ್ಮಗುಡಿ ಬೀದಿಯಲ್ಲಿನ ಕಾಳಿಕಾಂಭ ಕಮಟೇಶ್ವರ ದೇವಾಲಯ, ಗೌರಿಪೇಟೆಯ ಬಯಲು ಬಸವೇಶ್ವರ ದೇವಾಲಯ, ಅರಳೆಪೇಟೆಯ ಬಸವೇಶ್ವರ ದೇವಾಲಯ, ಚಂದ್ರಮೌಳೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಹರಿದು ಬಂದ ಭಕ್ತಸಾಗರ: ಶಿವನದೇಗುಲಗಳಿಗೆ ಮುಂಜಾನೆಯಿಂದಲೇ ಭಕ್ತ ಸಾಗರ ಹರಿದುಬರುತ್ತಿತ್ತು. ದೇವಾಲಯ ಆವರಣದ ನಂದಿ ವಿಗ್ರಹದ ಮುಂಭಾಗದಲ್ಲಿ ಭಕ್ತರು ದೀಪ ಬೆಳಗಿಸಿ ಹಣ್ಣು, ಕಾಯಿ ಇಟ್ಟು ಭಕ್ತಿಯಿಂದ ಸಮಸ್ಕರಿಸಿದರು. ಬಳಿಕ ಶಿವಲಿಂಗ ದರ್ಶನದೊಂದಿಗೆ ತೀರ್ಥ, ಪ್ರಸಾದ ಸ್ವೀಕರಿಸಿದರು. ಮನೆಗಳಲ್ಲಿ ಹಿರಿಯರು ಉಪವಾಸ ವ್ರತ ಆಚರಿಸಿ ದೇವರಿಗೆ ರಾಗಿ, ಜೋಳ ಹಾಗೂ ಸಾಮೆ ಪುರಿಯಿಂದ ಸಿದ್ಧಪಡಿಸಿದ ಉಂಡೆಗಳನ್ನು ನೈವೇದ್ಯ ಇಟ್ಟು ಪೂಜೆ ಸಲ್ಲಿಸಿದರು.

ಅಂತರಂಗೆಯಲ್ಲಿ ಇಂದು ಸೂರ್ಯರಶ್ಮಿ: ನಗರ ಹೊರವಲಯದ ಅಂತರಗಂಗೆ ಬೆಟ್ಟದ ಕಾಶಿ ವಿಶ್ವೇಶ್ವರಸ್ವಾಮಿ ದೇವಾಲಯದಲ್ಲಿ ಭಕ್ತರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಬಸವಮೂರ್ತಿಯ ಬಾಯಿಂದ ಬರುವ ಪವಿತ್ರ ಗಂಗೆಗೆ ಭಕ್ತರು ಮುಗಿಬಿದ್ದಿದ್ದರು. ಶಿವರಾತ್ರಿಯ ವಾರನೇ ದಿನವಾದ ಪಾರಣೆೆಯಂದು ಸೂರ್ಯ ಕಿರಣಗಳು ಅಂತರಗಂಗೆ ಬೆಟ್ಟದಲ್ಲಿನ ಕಾಶಿ ವಿಶ್ವೇಶ್ವರಸ್ವಾಮಿ ದೇವರ ಮೂರ್ತಿಯನ್ನು ಸ್ಪರ್ಶಿಸಲಿದ್ದು, ವೀಕ್ಷಣೆಗೆ ದೇವಾಲಯದಲ್ಲಿ ಸಿದ್ಧತೆ ಮಾಡಲಾಗಿದೆ.

ಜ್ಯೋತಿರ್ಲಿಂಗ ದರ್ಶನ: ಕೋಲಾರ ನಗರದ ಪ್ರಜಾಪಿತ ಬ್ರಹ್ಮಕುವಾರಿ ಈಶ್ವರಿಯ ವಿಶ್ವವಿದ್ಯಾಲಯದಿಂದ ಮಹಾಶಿವರಾತ್ರಿ ಪ್ರಯುಕ್ತ ಬ್ರಹ್ಮಕುವಾರಿ ಈಶ್ವರಿಯ ವಿಶ್ವವಿದ್ಯಾಲಯ ಆಧ್ಯಾತ್ಮಿಕ ಕಲಾ ಸಂಗ್ರಹಾಲಯದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಸಂಜೆ ಜಾಗರಣೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಶಿವಲಿಂಗ ಸ್ಪರ್ಶಿಸಿದ ಭಾಸ್ಕರ: ತಾಲೂಕಿನ ಕೊಂಡಗಂಡಹಳ್ಳಿ ಕಾಶಿವಿಶ್ವನಾಥ ದೇವಾಲಯದಲ್ಲಿ ಬೆಳಗ್ಗೆ 6.28ರಿಂದ 7.15ರ ಮಧ್ಯೆ ಪೂಜೆ ಮಾಡುತ್ತಿದ್ದಾಗಲೇ ಶಿವಲಿಂಗದ ಮೇಲೆ ಸೂರ್ಯನ ಕಿರಣಗಳು ತಾಗಿದವು. ಹಬ್ಬದ ಅಂಗವಾಗಿ ಮುಂಜಾನೆಯೇ ಶಿವನ ಲಿಂಗಕ್ಕೆ ಪ್ರಧಾನ ಅರ್ಚಕ ಶ್ರೀನಾಥ್ ದೀಕ್ಷಿತ್ ಅಭಿಷೇಕ ನೆರವೇರಿಸುತ್ತಿದ್ದರು, ಇದೇ ವೇಳೆ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಹಾದು ಹೋಗುವ ಮೂಲಕ ಪ್ರಕೃತಿಯ ವಿಸ್ಮಯಕ್ಕೆ ಸಾಕ್ಷಿಯಾಯಿತು. ಸೂರ್ಯನ ಕಿರಣಗಳು ಕಾಶಿವಿಶ್ವೇಶ್ವರ ಸ್ವಾಮಿಯ ಮೇಲೆ ಬಿದ್ದು, ಪ್ರಕಾಶವಾನವಾಗಿ ಬೆಳಗಿತು. ಇದನ್ನು ಕಂಡ ಭಕ್ತರು ಓಂ ನಮ ಶಿವಾಯ ಎಂದು ಶಿವನಾಮ ಜಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net