

ಮಡಿಕೇರಿ:
ಅಂತಾರಾಷ್ಟಿçÃಯ ಪ್ರಕೃತಿ ಸಂರಕ್ಷಣಾ ಒಕ್ಕೂಟದ (ಐಯುಸಿಎನ್) ಅಳಿವಿನಂಚಿನಲ್ಲಿ ಇರುವ ಜೀವಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಪರೂಪದ ಮಹಶೀರ್ ಮೀನುಗಳ ಕಳ್ಳಬೇಟೆ ನಿರಂತರವಾಗಿ ನಡೆಯುತ್ತಿರುವುದು ಮೀನುಗಾರಿಕೆ ಇಲಾಖೆಯ ತಲೆನೋವಿಗೆ ಕಾರಣವಾಗಿದೆ. ನದಿಗಳಲ್ಲಿ ನೀರಿನ ಹರಿವು ಕಡಿಮೆ ಆಗುತ್ತಿದ್ದಂತೆಯೇ ಚುರುಕಾಗಿರುವ ಮೀನು ಬೇಟೆಗಾರರು ತಮ್ಮ ಕೈ ಚಳಕ ತೋರಿಸುತ್ತಿದ್ದಾರೆ. ಕೊಡಗಿನ ಹಲವೆಡೆ ರಾಜಾರೋಷವಾಗಿ ಮಾರಾಟವೂ ನಡೆಯುತ್ತಿದೆ.
ಕರ್ನಾಟಕದಲ್ಲಿ ಕಾವೇರಿ, ತುಂಗಾ, ನೇತ್ರಾವತಿ ಹಾಗೂ ಕುಮಾರಧಾರ ನದಿಗಳಲ್ಲಿ ಮಾತ್ರ ಕಂಡುಬರುವ ಅಪರೂಪದ ತಳಿಯ ಮಹಶೀರ್ ಮೀನುಗಳಿಗೆ 'ಟೈಗರ್ ಆಫ್ ವಾಟರ್' ಎನ್ನುವ ಹೆಸರೂ ಇದೆ. ಅಳಿವಿನಂಚಿನಲ್ಲಿ ಇರುವ ಜೀವಿಗಳ ಪಟ್ಟಿಯಲ್ಲಿ ಇರುವ ಈ ಮೀನನ್ನು ದೇವರ ಮೀನು ಎಂದು ಕೂಡ ಕರೆಯುತ್ತಾರೆ. ವಿಷ್ಣು ಮತ್ಸಾö್ಯವತಾರ ಎತ್ತಿದಾಗ ಮಹಶೀರ್ ಮೀನಿನ ರೂಪದಲ್ಲಿದ್ದ ಎನ್ನುವ ಪೌರಾಣಿಕ ಕತೆಗಳೂ ಇವೆ. ವೈಜ್ಞಾನಿಕವಾಗಿ ಕಾರ್ಪ್ ಅಥವಾ ಮಿನ್ನೋ ಎಂದು ಕರೆಯಲಾಗುವ ವೈವಿಧ್ಯಮಯ ಮತ್ತು ದೊಡ್ಡದಾದ ಸಿಪ್ರಿನಿಡೆ ಕುಟುಂಬಕ್ಕೆ ಈ ಮೀನು ಸೇರಿದೆ. ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾ, ಚೀನಾ. ವಿಯೆಟ್ನಾಂ ದೇಶಗಳ ನದಿಗಳಲ್ಲೂ ಈ ಜಾತಿಯ ಮೀನುಗಳನ್ನು ಗುರುತಿಸಲಾಗಿದೆ.
ದೊಡ್ಡದಾದ ತಲೆ ಇರುವುದರಿಂದ ಮಹಾ ಮತ್ತು ಶಿರ ಸೇರಿ ಮಹಶೀರ್ ಹೆಸರು ಬಂದಿರಬಹುದು ಅಥವಾ ದೊಡ್ಡದಾದ ಹುರುಪೆಗಳು ಇರುವುದರಿಂದ ಮಹಾ ಮತ್ತು ಶಲ್ಕ್ ಸೇರಿ ಮಹಶೀರ್ ಆಗಿರಬಹುದು ಎನ್ನುವ ಅಭಿಪ್ರಾಯಗಳಿವೆ. ಕ್ರೀಡಾ ಮೀನುಗಳಾಗಿ ಗುರುತಿಸಿಕೊಂಡಿದ್ದು, ನೀರಿನಲ್ಲಿ ಸಮಬಲದ ಹೋರಾಟ ನಡೆಸಲು ಶಕ್ತವಾಗಿರುವುದರಿಂದ 'ನೀರಿನ ಹುಲಿ' ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ. ನಮ್ಮಲ್ಲಿ ಗೋಲ್ಡನ್ ಮಹಶೀರ್, ಡೆಕ್ಕನ್ ಮಹಶೀರ್, ಟಾರ್ ಕುಲಕರ್ಣಿ ಜಾತಿಯ ಮಹಶೀರ್‌ಗಳು ಕಂಡುಬರುತ್ತವೆ.
ಪ್ರಾಕೃತಿಕವಾಗಿ ಆರೋಗ್ಯಯುತವಾಗಿರುವ ಶುದ್ಧ ನೀರು, ವೇಗವಾಗಿ ಹರಿಯುವ ಬೆಣಚುಕಲ್ಲುಗಳಿಂದ ಕೂಡಿದ ನದಿ ಪಾತ್ರಗಳಲ್ಲಿ ಮಹಶೀರ್ ಮೀನುಗಳು ಕಂಡು ಬರುತ್ತದೆ. ಆವಾಸ ಸ್ಥಾನ ಶುದ್ಧವಾಗಿರುವ ಸ್ಥಳಗಳಲ್ಲಿ ಮಾತ್ರ ಸಂತಾನೋತ್ಪತ್ತಿ ಮಾಡುತ್ತವೆ.
ಹಾಗಾಗಿಯೇ ನದಿ ನೀರಿನ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಮಹಶೀರ್ ಜಾತಿಯ ಮೀನುಗಳು ಅಪಾಯದಲ್ಲಿದೆ. ಸಂತಾನೋತ್ಪತ್ತಿ ಸಂದರ್ಭ ಬದುಕುಳಿಯುವ ಮೀನುಗಳ ಶೇಕಡಾವಾರು ಪ್ರಮಾಣ ತೀರಾ ಕೆಳ ಮಟ್ಟ ತಲುಪಿದೆ. ಇದರಿಂದಾಗಿ ಮಹಶೀರ್ ಮೀನಿನ ಸಂತತಿ ಅಳಿವಿನಂಚಿನಲ್ಲಿ ಇರುವ ಜೀವಿಗಳ ಪಟ್ಟಿ ಸೇರುವಂತಾಗಿದೆ.
ಅಮೂಲ್ಯ ಜೀವ ವೈವಿಧ್ಯ ತಾಣವಾಗಿರುವ ಪಶ್ಚಿಮ ಘಟ್ಟದ ಮಡಿಲಲ್ಲಿ ಇರುವ ಕೊಡಗಿನ ನದಿಗಳು ಅಪರೂಪದ ಜಲಚರಗಳಿಗೆ ಆಶ್ರಯ ನೀಡಿದೆ. ವಿಶೇಷವಾಗಿ ಅಳಿವಿನಂಚಿನಲ್ಲಿರುವ ಮಹಶೀರ್ ಮೀನುಗಳು ಇಲ್ಲಿಯ ಕಾವೇರಿ ಮತ್ತು ಹಾರಂಗಿ ನದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತದೆ. ಮಹಶೀರ್ ಮೀನುಗಳ ರಕ್ಷಣೆಗಾಗಿಯೇ ನೆಲ್ಯಹುದಿಕೇರಿ ಸೇತುವೆಯಿಂದ ಕೊಡಗು-ಹಾಸನ ಗಡಿಯ ಶಿರಂಗಾಲ ತನಕ ಕಾವೇರಿ ನದಿಯನ್ನು ಸಂರಕ್ಷಿತ ಪ್ರದೇಶವಾಗಿ ಘೋಷಣೆ ಮಾಡಲಾಗಿದೆ. ಹಾರಂಗಿ ಅಣೆಕಟ್ಟೆಯಿಂದ ಕೂಡಿಗೆ ಸೇತುವೆ ತನಕದ ಪ್ರದೇಶ ಮತ್ತು ಕುಶಾಲನಗರ ಸಮೀಪದ ಕಾವೇರಿ ನಿಸರ್ಗಧಾಮವನ್ನು ಮತ್ಸö್ಯಧಾಮವನ್ನಾಗಿ ಘೋಷಣೆ ಮಾಡಲಾಗಿದೆ. ಇಲ್ಲಿ ಮಹಶೀರ್ ಮೀನು ಹಿಡಿಯುವುದನ್ನು ನಿಷೇಧಿಸಲಾಗಿದೆ.
ಈಗ ನದಿಯಲ್ಲಿ ನೀರಿನ ಹರಿವು ಕಡಿಮೆ ಆಗುತ್ತಿರುವುದರಿಂದ ಮೀನುಗಳು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದ, ದೊಡ್ಡ ದೊಡ್ಡ ಗುಂಡಿಗಳಲ್ಲಿ ಆಶ್ರಯ ಪಡೆಯುತ್ತಿವೆ. ಈ ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳುತ್ತಿರುವ ಕಳ್ಳಬೇಟೆಗಾರರು ಮೀನುಗಾರಿಕೆಗೆ ನಿಷೇಧ ಇರುವ ಪ್ರದೇಶಗಳಲ್ಲೂ ಎಗ್ಗಿಲ್ಲದೆ ಮೀನು ಹಿಡಿಯುವ ದಂಧೆ ನಡೆಸುತ್ತಿದ್ದಾರೆ. ಮಹಶೀರ್ ಸಂರಕ್ಷಿತ ಪ್ರದೇಶವಾಗಿರುವ ನೆಲ್ಯಹುದಿಕೇರಿಯಿಂದ ಶಿರಂಗಾಲ ಗೇಟ್ ತನಕವೂ ಮೀನು ಬೇಟೆಗಾರರು ತಮ್ಮ ದಂಧೆ ನಡೆಸುತ್ತಿದ್ದಾರೆ.
ಕಳ್ಳ ಬೇಟೆಗಾರರು ಮೀನು ಹಿಡಿಯಲು ನಿಷೇಧಿತ ವಿಧಾನಗಳನ್ನು ಅನುಸರಿಸುತ್ತಿರುವುದು ಹೆಚ್ಚು ಆತಂಕಕಾರಿಯಾಗಿದೆ. ನೀರು ನಿಂತಿರುವ ಗುಂಡಿಗಳಿಗೆ ವಿಷ ಪ್ರಾಶನ, ಡೈನಮೈಟ್ ಹಾಕುವ ಮೂಲಕ ಮೀನುಗಳು ಮಾತ್ರವಲ್ಲದೆ ಉಳಿದ ಜಲಚರಗಳ ಮಾರಣ ಹೋಮ ನಡೆಸಲಾಗುತ್ತಿರುವುದು ಅಲ್ಲಲ್ಲಿ ಕಂಡುಬರುತ್ತಿದೆ. ಈ ಸಂದರ್ಭದಲ್ಲಿ ಪ್ರೌಢ ಮಹಶೀರ್‌ಗಳ ಜತೆಗೆ ಬೆಳವಣಿಗೆ ಹಂತದಲ್ಲಿ ಇರುವ ಮರಿಗಳೂ ಸಾವನ್ನಪ್ಪುತ್ತಿವೆ. ಮಹಶೀರ್ ಮೀನನ್ನು ಯಾವುದೇ ಕಾರಣಕ್ಕೆ ಕೊಲ್ಲುವಂತಿಲ್ಲ. ಆದರೂ ಈ ಅಪರೂಪದ ಮೀನುಗಳು ಕಳ್ಳಬೇಟೆಗಾರರಿಗೆ ಬಲಿಯಾಗುತ್ತಿದೆ.
ಮಹಶೀರ್ ಮೀನುಗಳ ಸಂರಕ್ಷಿತ ಪ್ರದೇಶವಾಗಿ ಘೋಷಣೆ ಆಗಿರುವ ನೆಲ್ಯಹುದಿಕೇರಿಯಿಂದ ಶಿರಂಗಾಲ ಗೇಟ್ ತನಕದ ಭಾಗದಲ್ಲಿ ಮಹಶೀರ್ ಮೀನುಗಳ ಸಂವರ್ಧನೆ ಮತ್ತು ಸಂರಕ್ಷಣೆ ಹೊಣೆಗಾರಿಕೆ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಗೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರೂ ಸಂಸ್ಥೆಯ ಕಾರ್ಯಕರ್ತರ ಕಣ್ಣು ತಪ್ಪಿಸಿ ಬೇಟೆಗಾರರು ತಮ್ಮ ದುಷ್ಕೃತ್ಯ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ದುಬಾರೆಯಲ್ಲೂ ಕಾವೇರಿ ನದಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗೆ ಯಾಮಾರಿಸಿ ಅಕ್ರಮವಾಗಿ ಮೀನು ಬೇಟೆ ನಡೆಸಲಾಗುತ್ತಿದೆ.
ಅಕ್ರಮವಾಗಿ ಹಿಡಿದಿರುವ ಮಹಶೀರ್ ಮೀನುಗಳನ್ನು ಕೆಲವು ಊರುಗಳಲ್ಲಿ ಮಾರುಕಟ್ಟೆಗಳಲ್ಲಿ ಮಾರುವುದು ಕೂಡ ಕಂಡುಬAದಿದೆ. ವಿಷಯ ಗೊತ್ತಾದ ಕೂಡಲೇ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಮೀನುಗಳನ್ನು ವಶಪಡಿಸಿಕೊಂಡು ದಂಧೆಕೋರರ ವಿರುದ್ಧ ಪ್ರಕರಣ ದಾಖಲಿಸಿ, ಮಹಶೀರ್ ಮೀನುಗಳನ್ನು ಹಿಡಿಯದಂತೆ ಬುದ್ಧಿವಾದ ಹೇಳಿ ಕಳುಹಿಸಲಾಗುತ್ತಿದೆ. ಅಲ್ಲಲ್ಲಿ ಮೀನುಗಾರರಿಗೆ ಜಾಗೃತಿ ಕಾರ್ಯಕ್ರಮಗಳನ್ನೂ ನಡೆಸಲಾಗಿದೆ. ಆದರೂ ಮಹಶೀರ್ ಮೀನಿನ ಕಳ್ಳಬೇಟೆ ಮುಂದುವರಿದಿರುವುದು ಇಲಾಖೆ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ.
ಸರಿಯಾಗಿ ಬೆಳೆದ ಮಹಶೀರ್ ಮೀನು 50-60 ಕೆಜಿ ತನಕ ತೂಗುತ್ತದೆ. ಇದರ ಮಾಂಸ ಇತರ ಮೀನುಗಳಂತೆ ಬೇಗ ಕೆಡುವುದಿಲ್ಲ ಎನ್ನುವ ಕಾರಣಕ್ಕೆ ಹಿಂದೊಮ್ಮೆ ದೊಡ್ಡ ಪ್ರಮಾಣದಲ್ಲಿ ವಾಣಿಜ್ಯಿಕವಾಗಿ ಬಳಕೆ ಆದ ಕಾರಣದಿಂದಲೂ ಅಳಿವಿನ ಅಂಚು ತಲುಪಿದೆ ಎನ್ನಲಾಗುತ್ತಿದೆ. ಈ ಮೀನಿನ ಮರಿಯನ್ನು ಕೃತಕವಾಗಿ ಮಾಡುವುದು ಅಷ್ಟು ಸುಲಭವಲ್ಲ. ಮಹಾರಾಷ್ಟçದ ಪುಣೆ ಬಳಿಯ ಲೋನಾವಾಲದಲ್ಲಿ ಟಾಟಾ ಜಲವಿದ್ಯುತ್ ಘಟಕದ ಆವರಣದಲ್ಲಿರುವ ಮಹಶೀರ್ ತಳಿ ಮತ್ತು ಪಾಲನಾ ಕೇಂದ್ರದಲ್ಲಿ ಕೃತಕವಾಗಿ ಸಂತಾನೋತ್ಪತ್ತಿ ಮಾಡುವ ಘಟಕ ಇದೆ. ಇದನ್ನು ಹೊರತುಪಡಿಸಿದರೆ ದೇಶದಲ್ಲೇ 2ನೇ ಘಟಕ ಕುಶಾಲನಗರ ತಾಲೂಕು ಹಾರಂಗಿಯಲ್ಲಿದೆ. ಇಲ್ಲಿರುವ ಮೀನುಗಾರಿಕೆ ಇಲಾಖೆಯ ಮೀನು ಮರಿ ಉತ್ಪಾದನಾ ಕೇಂದ್ರದಲ್ಲಿ ಮಹಶೀರ್ ಮೀನು ಮರಿ ಉತ್ಪಾದನೆ ಮತ್ತು ಪಾಲನೆ ನಡೆಯುತ್ತಿದೆ. ಇಲ್ಲಿ ಉತ್ಪಾದನೆ ಆಗುವ ಮೀನು ಮರಿಗಳನ್ನು ಪ್ರತಿ ವರ್ಷವೂ ನದಿಗೆ ಬಿಡಲಾಗುತ್ತದೆ. ವಿಶೇಷ ಎಂದರೆ ಇಲ್ಲಿಗೆ ತಾಯಿ ಮೀನುಗಳನ್ನು ಲೋನಾವಾಲದಿಂದಲೇ ತರಿಸಿಕೊಳ್ಳಲಾಗಿದೆ.
ಅಂತಾರಾಷ್ಟಿçÃಯ ಪ್ರಕೃತಿ ಸಂರಕ್ಷಣಾ ಒಕ್ಕೂಟದ (ಐಯುಸಿಎನ್)ದ ಮಾಹಿತಿ ಪ್ರಕಾರ ಅಳಿವಿನಂಚಿನಲ್ಲಿ ಇರುವ ಜೀವಿಗಳ ಪಟ್ಟಿಯಲ್ಲಿ ಮಹಶೀರ್ ಮೀನು ಕೂಡ ಸೇರಿದೆ. ಇದು ನಮ್ಮ ರಾಜ್ಯದ ಕೆಲವೇ ನದಿಗಳಲ್ಲಿ ಕಂಡುಬರುವ ಅಪರೂಪದ ಮೀನು. ಪರಿಶುದ್ಧ ಪರಿಸರದಲ್ಲಿ ಮಾತ್ರ ವಾಸಿಸುವ ಮತ್ತು ಸಂತಾನೋತ್ಪತ್ತಿ ಮಾಡುವ ಮಹಶೀರ್ ರಾಜ್ಯದ ಹೆಮ್ಮೆಯ ಮೀನು ಕೂಡ ಹೌದು. ಇದು ಸಂರಕ್ಷಿತ ಮೀನು ಆಗಿರುವುದರಿಂದ ಬೇಟೆಯಾಡುವುದನ್ನು ನಿಷೇಧಿಸಲಾಗಿದೆ. ಆದರೂ ಕಳ್ಳಬೇಟೆ ಮುಂದುವರಿದಿರುವುದು ಆತಂಕಕಾರಿ ವಿಷಯ. ಕಳ್ಳಬೇಟೆಗಾರರ ವಿರುದ್ಧ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಾಗುತ್ತಿದೆ.
ಮಿಲನಾ ಭರತ್, ಸಹಾಯಕ ನಿರ್ದೇಶಕಿ, ಮೀನುಗಾರಿಕೆ ಇಲಾಖೆ, ಸೋಮವಾರಪೇಟೆ