ಮಹರ್ಷಿ ವಾಲ್ಮೀಕಿ ಮಹಾನ್ ಚೇತನ: ಜಿಲ್ಲಾಧಿಕಾರಿ ಡಾ.ಕುಮಾರ ಬಣ್ಣನೆ

Maharshi Valmiki Jayanti Mandya
Published on

ಮಂಡ್ಯ: ಮಹರ್ಷಿ ವಾಲ್ಮೀಕಿ ಜಗತ್ತು ಕಂಡ ಮಹಾನ್ ಚೇತನ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಭಿಪ್ರಾಯಪಟ್ಟರು.

ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಾಲ್ಮೀಕಿ ಒಂದು ಸಮುದಾಯದವರಿಗೆ ಸೀಮಿತವಾದವರಲ್ಲ. ಅವರ ತತ್ವ, ಆದರ್ಶ ಮತ್ತು ಚಿಂತನೆಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ತಿಳಿಸಿದರು.

ಸಾಮಾನ್ಯರಾಗಿ ಜನಿಸಿ ಅಸಾಮಾನ್ಯ ಸಾಧನೆ ಮಾಡಿದವರು. ಅವರು ರಚಿಸಿರುವ ರಾಮಾಯಣ ಗ್ರಂಥ ಇಂದಿಗೂ ಎಲ್ಲರ ಮನೆ ಹಾಗೂ ಮನಗಳಲ್ಲಿ ಚಿರಪರಿಚಿತ. ಶ್ಲೋಕ ಮತ್ತು ಕೃತಿಗಳನ್ನು ರಚಿಸುವ ಮೂಲಕ ಸಂಸ್ಕೃತಿ, ಸಂಸ್ಕಾರ, ಪರಂಪರೆ, ಜೀವನದ ಮೌಲ್ಯ ಮತ್ತು ಮಾನವೀಯತೆಯನ್ನು ಜಗತ್ತಿಗೆ ಸಾರಿದ್ದಾರೆ. ವಾಲ್ಮೀಕಿ ತಮ್ಮ ಕೃತಿಯಲ್ಲಿ ಮಾನವೀಯತೆ, ರಾಮರಾಜ್ಯ ಮತ್ತು ಪ್ರಜಾರಾಜ್ಯ ಕುರಿತಂತೆ ಪ್ರತಿ ವಿಷಯಗಳ ಬಗ್ಗೆಯೂ ತಿಳಿಸಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಹಿರಿಯರು ಇಂದಿನ ನಮ್ಮ ಮಕ್ಕಳಿಗೆ ಮತ್ತು ಯುವ ಪೀಳಿಗೆಗೆ ರಾಮಾಯಣದ ಮಹತ್ವವನ್ನು ತಿಳಿಸಿ ಎಂದು ಕರೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಅಕ್ಷರ ಜ್ಞಾನವಿದ್ದರೆ ಯಾರು ಯಾವ ಸಾಧನೆ ಬೇಕಾದರೂ ಸಾಧಿಸಬಹುದು. ಜತೆಗೆ ಸಮಾಜಕ್ಕೆ ಮಾದರಿಯಾಗಿ ಎಂದಿಗೂ ಅಳಿಯದ ಹೆಸರಾಗಿ ಉಳಿಯಬಹುದು ಎಂಬುದಕ್ಕೆ ಮಹರ್ಷಿ ವಾಲ್ಮೀಕಿ ಅವರು ನಿದರ್ಶನ. ತಮ್ಮ ಗ್ರಂಥ ರಾಮಾಯಣದ ಮೂಲಕ ವ್ಯಕ್ತಿಯ ವ್ಯಕ್ತಿತ್ವಗಳ ಮೌಲ್ಯವನ್ನು ಸಮಾಜಕ್ಕೆ ತಿಳಿಸಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ರಾಮಾಯಣದ ಪ್ರತಿ ಪಾತ್ರವು ಒಂದೊಂದು ಮೌಲ್ಯವನ್ನು ತಿಳಿಸುತ್ತದೆ. ಇಂದಿನ ಮಕ್ಕಳು ಮತ್ತು ಯುವ ಪೀಳಿಗೆ ರಾಮಾಯಣ ಓದುವುದರ ಜತೆಗೆ ಆ ಪಾತ್ರಗಳ ಮೌಲ್ಯಗಳನ್ನು ಅರಿತು ಬದುಕಬೇಕು. ಮನಸ್ಸಿನಲ್ಲಿ ದೃಢ ಸಂಕಲ್ಪವಿದ್ದರೆ ತಮ್ಮ ಗುರಿಯನ್ನು ಒಬ್ಬರೇ ತಲುಪಬಹುದು. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಗುರಿಯೆಡೆಗೆ ಸಾಗಲು ಮನಸ್ಸಿನಲ್ಲಿ ದೃಢ ಸಂಕಲ್ಪ ಮಾಡಿ ಎಂದು ತಿಳಿ ಹೇಳಿದರು.

ಶ್ರೀರಂಗಪಟ್ಟಣದ ವಿದ್ಯಾಭಾರತಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎಂ.ಆರ್.ಉಮೇಶ್ ಮಾತನಾಡಿ, ಪ್ರಸ್ತುತ ನಾವು ವಿದ್ಯಾವಂತರಾಗಿ ಸಮಾಜದಲ್ಲಿ ಜೀವನ ಸಾಗಿಸುತ್ತಿದ್ದು ಮಹರ್ಷಿ ವಾಲ್ಮೀಕಿ ಅವರನ್ನು ಒಂದು ಸಮುದಾಯಕ್ಕೆ ಸೀಮಿತಪಡಿಸುತ್ತಿರುವುದು ವಿಪರ್ಯಾಸದ ಸಂಗತಿ. ದೇಶದ ಮಹಾನ್ ವ್ಯಕ್ತಿಗಳನ್ನು ಕೇವಲ ಒಂದು ಜನಾಂಗ ಮತ್ತು ಸಮುದಾಯಕ್ಕೆ ಸೀಮಿತ ಪಡಿಸದೆ, ಅವರ ಆದರ್ಶ, ತತ್ವ ಹಾಗೂ ಪರೀತ್ಯಾಗಳನ್ನು ಪ್ರತಿಯೊಬ್ಬರೂ ತಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಿಬೇಕು ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಉಪವಿಭಾಗಾಧಿಕಾರಿ ಶಿವಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ಶ್ರೀನಿವಾಸ್, ನಗರಸಭೆ ಸದಸ್ಯರಾದ ಶ್ರೀಧರ್, ಶಿವಲಿಂಗು, ನಾಮನಿರ್ದೇಶಿತ ಸದಸ್ಯ ಹರೀಶ್, ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಸಂದೇಶ್, ವಿವಿಧ ಸಮುದಾಯ ಮುಖಂಡರಾದ ಚಂದ್ರನಾಯಕ್, ವೆಂಕಟೇಶ್‌ನಾಯಕ್ ಇತರರಿದ್ದರು. ಇದೇ ವೇಳೆ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಭವ್ಯ ರಥದೊಂದಿಗೆ ಡೊಳ್ಳು, ಕಂಸಾಳೆ, ಪೂಜೆ ಕುಣಿತ ಮತ್ತು ವೀರಗಾಸೆ ಮೂಲಕ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದವರೆಗೆ ಮೆರವಣಿಗೆ ಜರುಗಿತು. ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ಶ್ರೀನಿವಾಸ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕಾವ್ಯಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net