

ಕುಕನೂರು: ತಾಲೂಕು ಆಡಳಿತದಿಂದ ಪಟ್ಟಣದ ಕೋಳಿಪೇಟೆ ಹಳೇ ಬಸ್ ನಿಲ್ದಾಣದಲ್ಲಿ ಅ.7ರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಗುವುದು ಎಂದು ತಹಸೀಲ್ದಾರ್ ಎಚ್.ಪ್ರಾಣೇಶ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಪ್ರತಿವರ್ಷದಂತೆ ಈ ಬಾರಿಯೂ ಎಲ್ಲ ಇಲಾಖೆ ಸಹಯೋಗದಲ್ಲಿ ಜಯಂತಿ ಆಚರಿಸಲಾಗುವುದು ಎಂದರು.
ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಬಸನಗೌಡ ಪೊಲೀಸ್ ಪಾಟೀಲ್ ಮತ್ತು ಗೌರವಾಧ್ಯಕ್ಷ ಹಂಚಾಳಪ್ಪ ತಳವಾರ ಮಾತನಾಡಿ, ಜಯಂತಿ ಆಚರಣೆಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಎಲ್ಲ ಇಲಾಖೆ ಅಧಿಕಾರಿಗಳು ಜಯಂತಿಗೆ ಆಗಮಿಸುವುದಿಲ್ಲ. ತಾಲೂಕುಗಳಲ್ಲಿ 7 ಕಡೆ ವಾಲ್ಮೀಕಿ ಸಮುದಾಯ ಭವನಗಳ ಕಾಮಗಾರಿ ಅರೆಬರೆಯಾಗಿದ್ದು, ಇದು ಸಮಾಜದ ಮುಖಂಡರಿಗೆ ನೋವು ತರಿಸಿದ್ದು, ಅವುಗಳನ್ನು ಪೂರ್ಣಗೊಳಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಶಿಧರ ಸಕ್ರಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಸಮಾಜದ ಮೆಡಿಕಲ್, ಇಂಜಿನಿಯರಿಂಗ್, ಪಿಯುಸಿ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದರು.
ಮುಖಂಡರಾದ ಸಂಜೀವಪ್ಪ ಸಂಗಟಿ, ಮಂಗಳೇಶ ಮಂಗಳೂರು, ಕನಕಪ್ಪ ಬ್ಯಾಡರ್, ದ್ಯಾಮಣ್ಣ ಉಚ್ಚಲಕುಂಟಾ, ಹೇಮಣ್ಣ ಅಂಗಡಿ, ರಾಮಣ್ಣ ಯಡ್ಡೋಣಿ, ರಾಮಣ್ಣ ಮುಂದಲಮನಿ, ಹನುಮಪ್ಪ ಮರಡಿ, ಭರಮಪ್ಪ ತಳವಾರ, ಕನಕರಾಯ ನಿಂಗಾಪೂರ, ಸಿದ್ದಪ್ಪ ಗಾವರಾಳ, ಪ್ರಕಾಶ ತಹಸೀಲ್ದಾರ್, ಸಿದ್ದು ವಾಲ್ಮೀಕಿ ಇತರರಿದ್ದರು.