

ಮಡಿಕೇರಿ: ಮಹರ್ಷಿ ವಾಲ್ಮೀಕಿ ಅವರು ಬರೆದಿರುವ ರಾಮಾಯಣದಲ್ಲಿ ಭಾರತೀಯ ಸಂಸ್ಕೃತಿ, ಇತಿಹಾಸ ಮತ್ತು ಪರಂಪರೆಯನ್ನು ಕಾಣಬಹುದಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯ ರಚಿಸುವ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಇತಿಹಾಸವನ್ನು ಸಾರಿದ್ದಾರೆ. ಮಹಾ ಕಾವ್ಯದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಮಹರ್ಷಿ ವಾಲ್ಮೀಕಿ ಅವರ ಪರಿಕಲ್ಪನೆ, ದೂರದರ್ಶಿತ್ವ ಸ್ಮರಣೀಯವಾದುದು ಎಂದು ಜಿಲ್ಲಾಧಿಕಾರಿ ನುಡಿದರು.
ಆಧುನಿಕತೆ ಬೆಳೆದಂತೆ ಭಾರತೀಯ ಹಿಂದಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ಮರೆಯಬಾರದು. ವಾಲ್ಮೀಕಿ ರಾಮಾಯಣದ ಬಗ್ಗೆ ಅಂತರ್ಜಾಲದಲ್ಲಿ ಸಾಕಷ್ಟು ಮಾಹಿತಿ ದೊರೆಯಲಿದ್ದು, ಪ್ರತಿಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು. ವಿದ್ಯಾರ್ಥಿಗಳು ಅಧ್ಯಯನ ಕಡೆ ಹೆಚ್ಚು ಗಮನ ನೀಡಬೇಕು. ನಾಗರಿಕ ಸೇವೆಯ ಹುದ್ದೆ ಪಡೆಯಲು ಶ್ರಮಿಸಬೇಕು. ರಾಷ್ಟ್ರದ ಯಾವುದೇ ಭಾಗದಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ದರರಬೇಕು ಎಂದು ಸಲಹೆ ನೀಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ವಾಲ್ಮೀಕಿ ರಾಮಾಯಣವನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು. ಮಹರ್ಷಿ ವಾಲ್ಮೀಕಿ ಅವರು ರಾಮಾಯಣ ಬರೆಯುವ ಮೂಲಕ ಇಡೀ ಭಾರತೀಯ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಆ ನಿಟ್ಟಿನಲ್ಲಿ ಮಹರ್ಷಿ ವಾಲ್ಮೀಕಿ ಅವರನ್ನು ಸದಾ ಸ್ಮರಿಸುವಂತಾಗಬೇಕು ಎಂದು ನುಡಿದರು.
ಚಿಕ್ಕಳುವಾರದ ಕೊಡಗು ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮದ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ಕ್ರಿ.ಪೂ.ದಲ್ಲಿಯೇ ಒಳ್ಳೆಯ ನಾಗರಿಕ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಮಹಾನ್ ಮೇಧಾವಿಯಾಗಿದ್ದ ಮಹರ್ಷಿ ವಾಲ್ಮೀಕಿ ಅವರು ಇಡೀ ಮಾನವ ಸಮಾಜಕ್ಕೆ ಸಂಸ್ಕಾರ ಕಲಿಸಿದ್ದಾರೆ ಎಂದರು.
ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಶಿಕ್ಷಣದ ಮೂಲಕ ವಿಮೋಚನೆ ಪಡೆಯಬೇಕು. ಸಾಮಾಜಿಕ ಕ್ಷೇತ್ರದಲ್ಲಿ ಬದಲಾವಣೆ ಕಾಣಬೇಕು ಎಂದು ವಿವರಿಸಿದರು.
ವಾಲ್ಮೀಕಿ ನಾಯಕ ಸಂಘದ ಜಿಲ್ಲಾ ಅಧ್ಯಕ್ಷ ಅಶೋಕ್ ಮಾತನಾಡಿ, ವಾಲ್ಮೀಕಿ ರಾಮಾಯಣವು ರಾಷ್ಟ್ರದ ಸಂಸ್ಕೃತಿ, ನಾಡು, ನುಡಿ ಹಾಗೂ ಸವೋದರತ್ವ ಹೊಂದಿದ್ದು, ಇದನ್ನು ಅರಿತು ನಡೆದರೆ ರಾಷ್ಟ್ರ ರಾಮರಾಜ್ಯ ಆಗಲಿದೆ. ಮಹರ್ಷಿ ವಾಲ್ಮೀಕಿ ಅವರ ತತ್ವ ಸಂದೇಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಬೇಡರ ಕಣ್ಣಪ್ಪ, ಏಕಲವ್ಯ, ಚಿತ್ರದುರ್ಗದ ಕೋಟೆ ಹೀಗೆ ಹಲವು ಐತಿಹ್ಯಗಳನ್ನು ಸಮಾಜದಲ್ಲಿ ಕಾಣಬಹುದಾಗಿದೆ ಎಂದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ದಿವಾಕರ, ಐಟಿಡಿಪಿ ಇಲಾಖೆ ಅಧಿಕಾರಿ ಎಸ್.ಹೊನ್ನೆಗೌಡ, ಭಾಗಮಂಡಲ ಲ್ಯಾಂಪ್ ಸೊಸೈಟಿಯ ಮಿಟ್ಟು ರಂಜಿತ್, ಕುರುಬ ಸಮಾಜದ ಜಿಲ್ಲಾ ಅಧ್ಯಕ್ಷ ಗಂಗಾಧರ, ಏಕಲವ್ಯ ಮಾದರಿ ವಸತಿ ಶಾಲೆಯ ಪ್ರಾಂಶುಪಾಲರಾದ ಮೇವಾಲಾಲ್, ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಶಿವಕುಮಾರ, ಸಮಾಜದ ಮುಖಂಡರಾದ ಪರಮೇಶ್, ಚಂದ್ರು, ದೇವರಾಜು ಇತರರು ಇದ್ದರು.
೨೦೨೪-೨೫ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ನಗದು ಬಹುಮಾನ ನೀಡಲಾಯಿತು. ಹಾಗೆಯೇ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರನ್ನು ಗೌರವಿಸಲಾಯಿತು. ಸಮಗ್ರ ಗಿರಿಜನ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿ ನಿಲಯ ಹಾಗೂ ವಸತಿ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಗಮನ ಸೆಳೆದರು.