ಮಹರ್ಷಿ ವಾಲ್ಮೀಕಿ ತತ್ವಾದರ್ಶ ಸರ್ವಕಾಲಕ್ಕೂ ಪ್ರಸ್ತುತ: ಸಚಿವ ಡಿ. ಸುಧಾಕರ್

HYR valmiki jayanti
Published on

ಹಿರಿಯೂರು: ಮಹಾಕಾವ್ಯ ರಾಮಾಯಣವನ್ನು ರಚಿಸಿ ಜಗತ್ತಿಗೆ ಅತ್ಯಮೂಲ್ಯ ಕೊಡುಗೆ ನೀಡಿದ ಮಹರ್ಷಿ ವಾಲ್ಮೀಕಿ ಅವರ ತತ್ವ ಆದರ್ಶಗಳು ಸರ್ವ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ಜಿಲ್ಲಾ ಸಚಿವ ಡಿ. ಸುಧಾಕರ್ ಅವರು ಅಭಿಪ್ರಾಯಪಟ್ಟರು.

ನಗರದ ತಾಲೂಕು ಕಚೇರಿಯಲ್ಲಿ ಮಂಗಳವಾರ ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

"ಪ್ರತಿಭೆ ಹುಟ್ಟಿನ ಉಡುಗೊರೆ ಅಲ್ಲ, ಸಾಧನೆಯ ಗಳಿಕೆ" ಎನ್ನುವುದನ್ನು ಮಹಾಕಾವ್ಯ ರಾಮಾಯಣ ಬರೆದು ತೋರಿಸಿದ ಆದಿಕವಿ ವಾಲ್ಮೀಕಿ ಅವರ ಬದುಕು ಮತ್ತು ಸಾಧನೆ ನಮಗೆಲ್ಲ ಪ್ರೇರಣೆಯಾಗಿದೆ. ರಾಮಾಯಣವು ಬದುಕಿನ ಶ್ರೇಷ್ಠ ಪಾಠಗಳನ್ನು ಕಲಿಸುವುದರ ಜೊತೆಗೆ, ಅನ್ಯಾಯವನ್ನು ಸಹಿಸಬಾರದು ಎಂಬ ಮಹತ್ವದ ನೀತಿಯನ್ನು ಹೇಳಿದೆ ಎಂದು ಸಚಿವರು ತಿಳಿಸಿದರು.

ಅವರು ವಾಲ್ಮೀಕಿ ಮಹರ್ಷಿಯವರ ದೂರದೃಷ್ಟಿಯನ್ನು ಸ್ಮರಿಸಿದರು. "ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೆ 'ರಾಮರಾಜ್ಯ'ದ ಪರಿಕಲ್ಪನೆಯನ್ನು ನೀಡಿದವರು ಇದೇ ವಾಲ್ಮೀಕಿ ಮಹರ್ಷಿ" ಎಂದು ಒತ್ತಿ ಹೇಳಿದರು.

ಸಚಿವರು, ಅಕ್ಷರವು ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿದ್ದಂತಹ ಕ್ಲಿಷ್ಟಕರ ಕಾಲಘಟ್ಟದಲ್ಲಿ ವಾಲ್ಮೀಕಿ ಮಹರ್ಷಿ ಅವರು ಅಗಾಧ ಜ್ಞಾನ ಸಂಪಾದಿಸಿ ರಾಮಾಯಣ ಮಾಹಾಕಾವ್ಯವನ್ನು ರಚಿಸಿದರು ಎಂಬುದನ್ನು ಉಲ್ಲೇಖಿಸಿದರು.

ಅವರು "ದೇಶದ ಸಂಸ್ಕೃತಿಯನ್ನು ತಳ ಸಮುದಾಯಗಳಿಗೆ ಪರಿಚಯಿಸಿದ ಮಹಾನ್ ಚೇತನ" ಎಂದು ಬಣ್ಣಿಸಿದರು. ಅವರ ಆದರ್ಶಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರದೆ, ಸಮ ಸಮಾಜ ನಿರ್ಮಾಣಕ್ಕೆ ಇಂದಿಗೂ ದಾರಿದೀಪವಾಗಿವೆ ಎಂದು ಸಚಿವ ಡಿ. ಸುಧಾಕರ್ ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ.ಸಿದ್ದೇಶ್, ಪೌರಾಯುಕ್ತ ಎಂ.ವಾಸೀಂ, ಸಮಾಜ ಕಲ್ಯಾಣಾಧಿಕಾರಿ ದಿನೇಶ್, ಬಿಇಒ ತಿಪ್ಪೇಸ್ವಾಮಿ, ನಗರಸಭೆ ಅಧ್ಯಕ್ಷ ಬಾಲಕೃಷ್ಣ, ಉಪಾಧ್ಯಕ್ಷೆ ಮಂಜುಳಾ ಹಾಗೂ ಸದಸ್ಯರಾದ ಈ. ಮಂಜುನಾಥ್, ಮಮತಾ, ಈ. ಗೌಡ, ಸಣ್ಣಪ್ಪ ಮತ್ತು ಜಿಪಂ. ಮಾಜಿ ಸದಸ್ಯ ಆರ್.ನಾಗೇಂದ್ರನಾಯ್ಕ, ಗ್ಯಾರಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ಖಾದಿ ರಮೇಶ್ ಸೇರಿದಂತೆ ಅನೇಕ ಗಣ್ಯರು, ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net