

ಧಾರವಾಡ: ಮಹರ್ಷಿ ವಾಲ್ಮೀಕಿಯವರು ಸಂಸ್ಕೃತದ ಮೊಟ್ಟಮೊದಲ ಕವಿಯಾಗಿದ್ದು, ಆದಿಕವಿ ಎಂದು ಕರೆಯಲ್ಪಡುತ್ತಾರೆ. ಅವರು ಸಾಮಾಜಿಕ, ಧಾರ್ಮಿಕ, ಅಂಶಗಳನ್ನೊಳಗೊ0ಡ ರಾಮಾಯಣ ಗ್ರಂಥವನ್ನು ರಚಿಸಿದ್ದಾರೆ. ರಾಮಾಯಣದ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಹೇಳಿದರು.
ನಗರದ ಜೆಎಸ್‌ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಜೆಎಸ್‌ಎಸ್ ಐಟಿಐ ಕಾಲೇಜು, ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಎಲ್ಲ ಜಾತಿ, ಧರ್ಮಗಳಿಗೂ ಅನ್ವಯಿಸುವ ಮೌಲ್ಯಗಳನ್ನು ರಾಮಾಯಣದಲ್ಲಿ ಪ್ರತಿಪಾದಿಸಿದ್ದಾರೆ. ತಪಸ್ಸಿನಿಂದ ಭಾರತೀಯ ಸಾಂಸ್ಕೃತಿಕ ಬದುಕಿಗೆ ತಳಹದಿ ಎನಿಸಿದ ಮಹಾಕಾವ್ಯವನ್ನು ರಚಿಸಿದ್ದು, ಪ್ರತಿಭೆಗೆ ಜಾತಿ- ಭೇದವಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಆರ್.ವಿ. ಚಿಟಗುಪ್ಪಿ, ರೋನಿಲ್ ಮನೋಹರ, ಮುರಳಿಧರ ಹೆಗಡೆ, ಶ್ರವಣ ಯೋಗಿ, ಶಿಲ್ಪಾ ನಾಯಕ್, ರಜನಿ ತಾಳಿಕೋಟಿ, ಶ್ರುತಿ ಶೆಟ್ಟಿ, ಇತರರಿದ್ದರು. ಮಹಾವೀರ ಉಪಾಧ್ಯೆ ನಿರೂಪಿಸಿದರು. ಸೂರಜ್ ಜೈನ್ ವಂದಿಸಿದರು.