ಸ್ಮರಣೀಯ ವ್ಯಕ್ತಿತ್ವಕ್ಕೆ ಮಹರ್ಷಿ ಉದಾಹರಣೆ

BKL MV
Published on

ಭಟ್ಕಳ: ಮಾಡಿದ ತಪ್ಪನ್ನು ತಿದ್ದಿಕೊಂಡು ಮನುಕುಲವೇ ಸ್ಮರಿಸುವ ವ್ಯಕ್ತಿಯಾಗಬಹುದು ಎನ್ನುವುದಕ್ಕೆ ಶ್ರೀ ಮಹರ್ಷಿ ವಾಲ್ಮೀಕಿ ಉತ್ತಮ ಉದಾಹರಣೆ ಎಂದು ಮೀನುಗಾರಿಕೆ, ಬಂದರು ಸಚಿವ ಮಂಕಾಳ ವೈದ್ಯ ಹೇಳಿದರು.

ಪಟ್ಟಣದಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಮಹರ್ಷಿ ಮಹತ್ಕಾರ್ಯ ಸ್ಮರಿಸಿ ಸರ್ಕಾರ ವಾಲ್ಮೀಕಿ ನಿಗಮ ಸ್ಥಾಪಿಸಿದೆ. ವಸತಿ ಶಾಲೆ, ವಿದ್ಯಾರ್ಥಿ ನಿಲಯ ಸ್ಥಾಪನೆ, ಪಪಂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಯುವ ಪೀಳಿಗೆಗೆ ಸ್ವಯಂ ಉದ್ಯೋಗ, ಗಂಗಾ ಕಲ್ಯಾಣ, ಮೈಕ್ರೋ ಕ್ರೆಡಿಟ್ ಯೋಜನೆಗಳ ಅನುಷ್ಠಾನ, ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಮತ್ತಿತರ ಯೋಜನೆಗಳನ್ನು ರೂಪಿಸಿದೆ ಎಂದರು.

ಭಾಸ್ಕರ ನಾಯ್ಕ ಉಪನ್ಯಾಸ ನೀಡಿದರು. ಉಪವಿಭಾಗಾಧಿಕಾರಿ ಡಾ. ನಯನಾ ಎನ್ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಅಶೋಕ ಭಟ್, ತಾಪಂ ಇಒ ವೆಂಕಟೇಶ ನಾಯಕ, ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಎನ್. ಮಂಜಪ್ಪ, ಗೊಂಡ ಸಮಾಜದ ಅಧ್ಯಕ್ಷ ನಾರಾಯಣ ಎಂ. ಗೊಂಡ, ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ವೆಂಕಟೇಶ ಗೊಂಡ, ಮಾರುಕೇರಿ ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಗೊಂಡ, ಬೆಳಕೆ ಪಂಚಾಯಿತಿ ಅಧ್ಯಕ್ಷ ಜಗದೀಶ ನಾಯ್ಕ ಇತರರು ಇದ್ದರು. ಪಪಂಗಳ ವಿದ್ಯಾರ್ಥಿಗಳಿಗೆ ಸಚಿವರು ಗೌರವಿಸಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ ಹೆಗಡೆ, ಶಿಕ್ಷಕ ಸುರೇಶ ಮುರ್ಡೇಶ್ವರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net