ಮಹರ್ಷಿ ಭಗೀರಥರ ಸಾಧನೆ ಮಾದರಿ

BHAGIRATHA
Published on

ಮುಂಡರಗಿ: ಜೀವನದಲ್ಲಿ ದೃಢ ಸಂಕಲ್ಪ, ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಮಹರ್ಷಿ ಭಗೀರಥರು ಮಾದರಿಯಾಗಿದ್ದಾರೆ. ಅವರು ತಪ್ಪಸ್ಸಿನ ಮೂಲಕ ಗಂಗೆಯನ್ನು ಧರೆಗೆ ಕರೆಸಿದರು. ಇಂದಿನ ಯುವ ಪೀಳಿಗೆಯು ಭಗೀರಥರ ಆದರ್ಶವನ್ನು ಅಳವಡಿಸಿಕೊಂಡು ಸಾಧನೆ ಮಾಡಬೇಕು ಎಂದು ತಹಸೀಲ್ದಾರ್ ಎರ‌್ರಿಸ್ವಾಮಿ ಪಿ.ಎಸ್. ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಉಪ್ಪಾರ ಸಮಾಜದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಧನೆ ಮಾಡಬೇಕೆನ್ನುವ ಗುರಿ ಹೊಂದಿದವರು ಯಾವುದೇ ಕಾರಣಕ್ಕೂ ಧೃತಿಗೆಡದೆ ಸಾಧಿಸುವ ಮನೋಭಾವ ಹೊಂದಿ ಮುನ್ನಡೆಯಬೇಕು. ಸತತ ಪ್ರಯತ್ನ, ಪರಿಶ್ರಮದ ಮೂಲಕ ಸಾಧನೆಯ ಶಿಖರ ತಲುಪಲು ಸಾಧ್ಯವಾಗುತ್ತದೆ. ಸಾಧನೆ ಮಾಡಬೇಕೆಂಬ ಗುರಿ ನಮ್ಮೊಳಗೆ ಸದಾ ಮಿಡಿಯುತ್ತಿರಬೇಕು ಎಂದರು.

ಮುಖ್ಯಶಿಕ್ಷಕ ಎಸ್.ಎಚ್. ಇಟಗಿ ಉಪನ್ಯಾಸ ನೀಡಿದರು. ತಾಲೂಕು ಸಾರ್ವಜನಿಕರ ಹೋರಾಟ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಮಾತನಾಡಿದರು. ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಉಪ್ಪಾರ ಸಮಾಜದ ವಿದ್ಯಾರ್ಥಿಗಳಾದ ಕಾವ್ಯಾ ಉಪ್ಪಾರ, ಸ್ವಪ್ನಾ ದಾಸಕನಕಪ್ಪನವರ, ಭೂಮಿಕಾ ಬೆನ್ನಳ್ಳಿ, ರಂಜಿತಾ ಬರದೂರ, ಪ್ರೀತಮ್ ಅಗಸಿಮುಂದಿನ, ಚೇತನಾ ಉಪ್ಪಾರ ಅವರನ್ನು ಸನ್ಮಾನಿಸಲಾಯಿತು.

ಬಸವಣ್ಣೆಪ್ಪ ಉಪ್ಪಾರ, ಚಂದ್ರಪ್ಪ ಗದ್ದಿ, ಪರಸಪ್ಪ ತಿಪ್ಪಣ್ಣವರ, ಹನುಮಪ್ಪ ಹುಗ್ಗೆಪ್ಪನವರ, ನಿಂಗಪ್ಪ ಭಂಡಾರಿ, ಮಂಜಪ್ಪ ಉಪ್ಪಾರ, ಡಾ.ಸಚಿನ್ ಉಪ್ಪಾರ, ಧೃವಕುಮಾರ ಹೂಗಾರ, ರವಿ ಪಾಟೀಲ, ಯಮನಪ್ಪ ಭಜಂತ್ರಿ, ಮಹಾದೇವಪ್ಪ ಗಡಾದ, ನಿಂಗಪ್ಪ ಉಪ್ಪಾರ, ಶರಣಪ್ಪ ಹೊಸಮನಿ ಇತರರು ಇದ್ದರು.

ತಾಲೂಕು ಉಪ್ಪಾರ ಸಮಾಜದ ಅಧ್ಯಕ್ಷ ಈರಣ್ಣ ಗಡಾದ ಸ್ವಾಗತಿಸಿದರು. ಎಸ್.ಎಚ್. ಇಟಗಿ ನಿರೂಪಿಸಿದರು. ಸುರೇಶ ಉಪ್ಪಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net