

ಸವಣೂರ: ಪಟ್ಟಣದ ಶುಕ್ರವಾರ ಪೇಟೆಯ ಶ್ರೀ ವೀರಭದ್ರೇಶ್ವರ ದೇವರ ಮಹಾರಥೋತ್ಸವ ಭಾನುವಾರ ಸಂಭ್ರಮ, ಸಡಗರದಿಂದ ಜರುಗಿತು.
ಪ್ರಾತಃಕಾಲ ಶ್ರೀ ವೀರಭದ್ರೇಶ್ವರ ಹಾಗೂ ನಂದೀಶ್ವರ ದೇವರಿಗೆ ಮಹಾರುದ್ರಾಭಿಷೇಕ, ಎಲೆ ಪೂಜೆ, ಪುಷ್ಪಾರ್ಚನೆ, ಬಿಲ್ವಾರ್ಚನೆ ಹಾಗೂ ವಿವಿಧ ವಿಶೇಷ ಪೂಜಾ ಕೈಂಕರ್ಯ ಕೈಗೊಳ್ಳಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಶೇಷವಾಗಿ ಅಲಂಕಾರಗೊಂಡ ಎತ್ತುಗಳ ಮೆರವಣಿಗೆ, ವೀರಭದ್ರೇಶ್ವರ ದೇವರ ಉತ್ಸವ ಮೂರ್ತಿ ಪಲ್ಲಕ್ಕಿ ಉತ್ಸವ ಜರುಗಿತು.
ಅಂದು ಸಂಜೆ ಹಿರೇಮಣಕಟ್ಟಿ ಗ್ರಾಮದ ಮುರುೇಂದ್ರಮಠದ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ದೇವಸ್ಥಾನದಿಂದ ಚಾಲನೆಗೊಂಡ ಮಹಾರಥೋತ್ಸವ ಉಪ್ಪಾರ ಓಣಿ ಶ್ರೀ ಬಸವೇಶ್ವರ ದೇವಸ್ಥಾನದ ಪಾದಗಟ್ಟಿವರೆಗೆ ಡೊಳ್ಳು, ಝಾಂಜಮೇಳ, ಭಜನೆಯೊಂದಿಗೆ ಅದ್ದೂರಿಯಾಗಿ ಜರುಗಿತು.
ರಥೋತ್ಸವದ ಉದ್ದಕ್ಕೂ ರಥ ಬೀದಿಯಲ್ಲಿ ಮಹಿಳೆಯರು, ಮಕ್ಕಳು, ಯುವಕರು, ಶ್ರೀ ವೀರಭದ್ರೇಶ್ವರ ಮಹಾರಾಜ್ ಕಿ ಜೈ ಜಯಘೋಷ ಮೊಳಗಿಸಿದರು. ರಥದ ಕಳಸಕ್ಕೆ ಭಕ್ತರು ಬಾಳೆ ಹಣ್ಣು, ಉತ್ತತ್ತಿ ಎಸೆದರು.