ಶಿವಾಜಿ ಮಹಾರಾಜರ ಮೂರ್ತಿ ಮೆರವಣಿಗೆ

CDN 17-2
Published on

ಚಡಚಣ: ಸಿಂದಗಿ ತಾಲೂಕಿನ ಮಲಘಾಣ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಳ್ಳುವ ಅಶ್ವಾರೂಢ ಶಿವಾಜಿ ಮಹಾರಾಜರ ಪ್ರತಿಮೆ ಶನಿವಾರ ಚಡಚಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಭವ್ಯ ಸ್ವಾಗತ ನೀಡಿ, ಮೆರವಣಿಗೆ ಮಾಡಿದರು.
ಪುಣೆಯಿಂದ ಪಂಢರಪುರ, ಮಂಗಳವೇಡ ಮಾರ್ಗವಾಗಿ ಚಡಚಣ ಪಟ್ಟಣಕ್ಕೆ ಬೆಳಗ್ಗೆ ಆಗಮಿಸಿತು. ಪಟ್ಟಣದ ಪಂಢರಪುರ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಬಳಿ ಸೇರಿದ ನೂರಾರು ಗಣವೇಷಧಾರಿಗಳು ಪ್ರತಿಮೆಯೊಂದಿಗೆ ಆಗಮಿಸಿದ ಎಲ್ಲರನ್ನೂ ಸತ್ಕರಿಸಿ, ಆತ್ಮೀಯ ಸ್ವಾಗತ ಕೋರಿದರು.
ನಂತರ ಬಸವೇಶ್ವರ ವೃತ್ತ, ಶಿವಾಜಿ ವೃತ್ತಗಳ ಮೂಲಕ ಬೃಹತ್ ಮೆರವಣಿಗೆ ಸಾಗಿ, ಕೊನೆಗೆ ಕೆಇಬಿ ಕಚೇರಿ ಬಳಿ ಮುಕ್ತಾಯಗೊಂಡಿತು. ಶಿವಾಜಿ ವೃತ್ತದಲ್ಲಿ ನಡೆದ ಸಭೆಯಲ್ಲಿ ಪಿಎಸ್‌ಐ ಮಹಾದೇವ ಯಲಿಗಾರ ಮಾತನಾಡಿದರು.
ಪಪಂ ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ, ತಾಪಂ ಮಾಜಿ ಸದಸ್ಯ ರಾಮ ಅವಟಿ ಸೇರಿ ಮತ್ತಿತರ ಮುಖಂಡರು ಪ್ರತಿಮೆಗೆ ಪೂಜೆ ಸಲ್ಲಿಸಿ, ಬರಡೋಲ, ಝಳಕಿ ಮಾರ್ಗವಾಗಿ ಬೀಳ್ಕೊಟ್ಟರು.
ಮರಾಠಾ ಸಮಾಜದ ಅಧ್ಯಕ್ಷ ಅಂಬಾದಾಸ ಸಿಂದಗಿ, ಉಪಾಧ್ಯಕ್ಷ ಅರವಿಂದ ಸಾವಂತ, ಪ.ಪಂ. ಸದಸ್ಯರಾದ ವಿಜಯಕುಮಾರ ಅವಟಿ, ಮಲ್ಲು ಧೋತ್ರೆ, ಮುಖಂಡರಾದ ಅಶೋಕ ಜಾಧವ, ಅಪ್ಪಾರಾವ ಶಿಂಧೆ, ರಾಜು ಕೋಳಿ, ದೇವೆಂದ್ರಪ್ಪ ಪಾಟೀಲ, ಚಂದು ಶಿಂಧೆ, ಸುನೀಲ ಕ್ಷತ್ರಿ, ದೀಪಕ ಕದಂ, ಕೃಷ್ಣಾ ಘೋಪ್ಡೆ, ಪರಶುರಾಮ ಶಿಂಧೆ, ಕ್ಷತ್ರಿ ಸೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net