

ಹೊಸಪೇಟೆ: ಮಹಾರಾಷ್ಟ್ರದಲ್ಲಿ ನಡೆದ ಜಿಲ್ಲೆಯ ಶ್ರೀ ರುದ್ರ ಪಶುಪತಿ ಶಿವಾಚಾರ್ಯರ ಪ್ರಕರಣ ಖಂಡಿಸಿ ವೀರಶೈವ ಮಹಾಸಭಾ ಮತ್ತು ವೀರಶೈವ ಲಿಂಗಾಯತ ಸಮುದಾಯದ ತಾಲೂಕು ಸಮಿತಿ ಮಂಗಳವಾರ ತಹಸೀಲ್ದಾರ್ ಎಚ್.ವಿಶ್ವನಾಥಗೆ ಮನವಿ ಸಲ್ಲಿಸಿತು.
ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಸಾಲಿ ಸಿದ್ದಯ್ಯಸ್ವಾಮಿ ಮಾತನಾಡಿ, ಮನುಷ್ಯನಿಗೆ ವಿವೇಕ ನೀಡುವ ಧರ್ಮ, ಧಾರ್ಮಿಕತೆ, ಧಾರ್ಮಿಕ ಪ್ರಜ್ಞೆ ಮತ್ತು ಧಾರ್ಮಿಕ ಸಂತರನ್ನು ಹಿಂಸಾತ್ಮಕ ದೃಷ್ಟಿಯಲ್ಲಿ ನೋಡುವ ವಾತವರಣ ಸೃಷ್ಟಿಯಾಗಿರುವುದು ಆತಂಕ ಉಂಟು ಮಾಡಿದೆ. ಕೆಲ ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಬಹಿರಂಗವಾಗಿಯೇ ಹಿಂದು ಸಾಧು ಸಂತರ ಹತ್ಯೆ ಮಾಡಿರುವುದು, ಬೈಲಹೊಂಗಲದ ವೀರಶೈವ-ಲಿಂಗಾಯತ ಮಠಕ್ಕೆ ಕಳ್ಳರು ನುಗ್ಗಿ ಶ್ರೀಗಳ ಮೇಲೆ ಹಲ್ಲೆ ನೆಡೆಸಿರುವುದು ಖಂಡನೀಯ. ಶ್ರೀರುದ್ರ ಪಶುಪತಿ ಶ್ರೀಗಳ ಹತ್ಯೆ ಹಿಂದೆ ದೊಡ್ಡ ಸಂಚು ಇರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಹಂತಕರ ಪತ್ತೆ ಹಚ್ಚಿ ಕಠಡಿಣ ಶಿಕ್ಷೆಗೆ ಒಳಪಡಿಸಬೇಕು. ಶ್ರೀಗಳಿಗೆ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ವೀರಶೈವ ಸಮುದಾಯದ ತಾಲೂಕು ಅಧ್ಯಕ್ಷ ಎಚ್.ವಿ.ಶರಣಸ್ವಾಮಿ ಮಾತನಾಡಿ, ಶ್ರೀಗಳ ಹತ್ಯೆ ತನಿಖೆ ಸಿಬಿಐಗೆ ಒಪ್ಪಿಸಬೇಕು. ಆರೋಪಿಗಳ ಪತ್ತೆಗೆ ರಾಜ್ಯ ಸರ್ಕಾರ ಮಹಾರಾಷ್ಟ್ರ ಸಿಎಂಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಕೆ.ರವಿಶಂಕರ, ಬಿ.ಎಂ.ಸೋಮಶೇಖರ, ಎಸ್.ಎಂ.ರವಿಕಾಂತ, ಐ.ಸಂಗನಬಸಪ್ಪ, ಎನ್.ಎಂ.ರವಿಶಂಕರ, ಎನ್.ಎಂ.ಪಂಪಾಪತಿ ಇತರರಿದ್ದರು.