ಚಾಮರಾಜನಗರಕ್ಕೂ‌ ಕಂಟಕವಾಯಿತು ಮಹಾ ನಂಟು

corona new
Published on

ಚಾಮರಾಜನಗರ: ರಾಜ್ಯದ ‌ಏಕೈಕ ಕರೊನಾ ಮುಕ್ತ ಜಿಲ್ಲೆ ಚಾಮರಾಜನಗರಕ್ಕೆ ಕರೊನಾ‌ ಹಾಟ್‌ಸ್ಪಾಟ್ ಮಹಾರಾಷ್ಟ್ರ ಮಹಾ ಪ್ರಸಾದ ನೀಡಿದೆ. ಮುಂಬೈನಿಂದ ಜಿಲ್ಲೆಗೆ ಆಗಮಿಸಿದ್ದ ಮೆಡಿಕಲ್ ವಿದ್ಯಾರ್ಥಿಗೆ ಕರೊನಾ ಸೋಂಕು‌‌ ತಗುಲಿರುವುದು ಧೃಡಪಟ್ಟಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಸುದ್ದಿಗೋಷ್ಠಿ ನಡೆಸಿ, ಮುಂಬೈನಿಂದ ಹನೂರಿನ ಮಾರ್ಟಳ್ಳಿಯ ಪಾಲಿಮೇಡು ಗ್ರಾಮಕ್ಕೆ ಬಂದಿದ್ದ ತಾಯಿ, ಇಬ್ಬರು ಮಕ್ಕಳಲ್ಲಿ 22 ವರ್ಷ‌ ವಯಸ್ಸಿನ ಕಿರಿಯ ಮಗನಿಗೆ(ಮೆಡಿಕಲ್ ವಿದ್ಯಾರ್ಥಿ) ಸೋಂಕು‌‌ ತಗುಲಿದೆ. ಮಹಾರಾಷ್ಟ್ರದಲ್ಲಿ ಕರೊನಾ ಉಲ್ಭಣಗೊಂಡಿದ್ದ ಹಿನ್ನಲೆ ತಾಯಿಯನ್ನು‌‌ ಪಾಲಿಮೇಡು ಗ್ರಾಮದಲ್ಲಿರುವ ಮಾವನ ಮನೆಗೆ ಬಿಡಲು ಸೋಂಕಿತ‌ ತನ್ನ ಅಣ್ಣನೊಂದಿಗೆ ಶುಕ್ರವಾರ ಜಿಲ್ಲೆಗೆ ಆಗಮಿಸಿದ್ದ.

ರೈಲಿನ ಮೂಲಕ ಮಹಾರಾಷ್ಟ್ರದಿಂದ‌ ಬೆಂಗಳೂರಿಗೆ ಆಗಮಿಸಿದ ತಾಯಿ ಮತ್ತು ಮಕ್ಕಳು ತಮ್ಮ‌ಮಾವನ ಜತೆ ಕಾರಿನಲ್ಲಿ ಪಾಲಿಮೇಡು ಗ್ರಾಮಕ್ಕೆ ಬಂದಿದ್ದರು. ರಾತ್ರಿ ಮನೆಯಲ್ಲಿ ಉಳಿದಿದ್ದ ಇವರನ್ನು ಬೆಳಗ್ಗೆ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಈ ವೇಳೆ ಮೆಡಿಕಲ್ ವಿದ್ಯಾರ್ಥಿಗೆ ಕರೊನಾ ಸೋಂಕು ಕಾಣಿಸಿಕೊಂಡಿರುವುದು ಧೃಡಪಟ್ಟಿದೆ. ಇತನ ತಾಯಿ, ಅಣ್ಣನ ವರದಿ ನೆಗೆಟಿವ್ ಬಂದಿದೆ‌‌ ಎಂದು ಡಿಸಿ ರವಿ ತಿಳಿಸಿದ್ದಾರೆ.

ಸೋಂಕಿತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನು ಕ್ವಾರಂಟೈನ್ ಗೊಳಪಡಿಸಲಾಗಿದೆ. ಜಿಲ್ಲೆಯಲ್ಲಿ ಯಾರೊಬ್ಬರಿಗೂ ಕರೊನಾ ಕಾಣಿಸಿಕೊಂಡಿಲ್ಲ‌. ಸೋಂಕಿತ ವ್ಯಕ್ತಿ ಮಹಾರಾಷ್ಟ್ರದವನಾಗಿದ್ದು, ಹೊರ ರಾಜ್ಯದಿಂದ ಬಂದ ಇತರೆ ಗುಂಪಿಗೆ ಸೇರಿತ್ತಾನೆ ಎಂದು ಡಿಸಿ ರವಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net