

ಬೆಂಗಳೂರು: ಮುಂಗಾರು ಚುರುಕುಗೊಂಡು ರಾಜ್ಯದಲ್ಲಿ ನೆರೆ ಆತಂಕ ಕಾಣಿಸಿಕೊಂಡಿರುವಂತೆಯೇ ಕೃಷ್ಣಾ, ಭೀಮಾ ನದಿಗಳ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣ ಹಾಗೂ ನಿರ್ವಹಣೆಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳ ನಡುವಿನ ಮಾತುಕತೆ ಫಲಪ್ರದವಾಗಿದೆ.
ಕೃಷ್ಣಾ ಕೊಳ್ಳದ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ, ಕೃಷ್ಣಾ ಮತ್ತು ಭೀಮಾ ನದಿಗಳ ಪಾತ್ರದ ಜಲಾಶಯಗಳಿಗೆ ಒಳಹರಿವು, ನೀರು ಸಂಗ್ರಹ ಪ್ರಮಾಣದ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಹಂಚಿಕೊಳ್ಳಲು ಉಭಯ ರಾಜ್ಯಗಳು ಸಮ್ಮತಿಸಿವೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ನೀರಾವರಿ ಯೋಜನೆಗಳಿಗೆ 4 ಟಿಎಂಸಿ ನೀರು ಒದಗಿಸುವ ದೂದಗಂಗಾ ಯೋಜನೆಯನ್ನು 2 ವರ್ಷಗಳಲ್ಲಿ ಪೂರ್ಣಗೊಳಿಸುವ ರಾಜ್ಯದ ಕನಸಿಗೂ ಮಹಾರಾಷ್ಟ್ರ ಸ್ಪಂದಿಸಿದ್ದು, ಕೃಷ್ಣಾ ಐತೀರ್ಪಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಜಂಟಿಹೋರಾಟ ನಡೆಸುವ ಸಂಬಂಧ ಉಭಯ ರಾಜ್ಯಗಳು ಒಡಂಬಡಿಕೆಗೆ ಬಂದಿವೆ.
ಕೃಷ್ಣಾ ಕಣಿವೆ ಪ್ರದೇಶದಲ್ಲಿ ಭರಪೂರ ಮಳೆಯಾಗುತ್ತಿರುವ ಬೆನ್ನಲ್ಲೇ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಉಭಯ ರಾಜ್ಯಗಳ ಸಚಿವರಮಟ್ಟದ ಸಮನ್ವಯ ಸಮಿತಿಯ ಮಹತ್ವದ ಸಭೆ ಶನಿವಾರ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿಎಂ ಯಡಿಯೂರಪ್ಪ ಅವರು ನಾಲ್ಕು ಪ್ರಮುಖ ವಿಷಯಗಳಲ್ಲಿ ಉಭಯ ರಾಜ್ಯಗಳ ಮಧ್ಯೆ ಸಹಮತ ವ್ಯಕ್ತವಾಗಿದೆ ಎಂದು ಪ್ರಕಟಿಸಿದರು.
ದಶಕಗಳ ಕನಸು ಶ್ರೀವೇ ನನಸು ಬೆಂಗಳೂರು: ದೂದ್ ಗಂಗಾ ಯೋಜನೆ ಪೂರ್ಣಗೊಳಿಸುವ ದಶಕಗಳ ಕನಸನ್ನು ಸಾಕಾರಗೊಳಿಸುವ ರಾಜ್ಯದ ಉತ್ಸುಕತೆಗೆ ಮಹಾರಾಷ್ಟ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಉಭಯ ರಾಜ್ಯಗಳ ಜಂಟಿ ಮಾತುಕತೆ ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಶನಿವಾರ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಉಭಯ ರಾಜ್ಯಗಳ ಸಚಿವರ ಮಟ್ಟದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಯೋಜನೆ ಪೂರ್ಣಗೊಂಡರೆ ಎರಡೂ ರಾಜ್ಯಗಳ ಒಟ್ಟಾರೆ 60,000 ಹೆಕ್ಟೇರ್ ಪ್ರದೇಶಗಳು ನೀರಾವರಿಗೆ ಒಳಪಡಲಿದೆ ಎಂದರು.
ಎರಡು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ದೂದ್ ಗಂಗಾ ಯೋಜನೆ ಮತ್ತೆ ಚಾಲನೆ ಪಡೆದುಕೊಳ್ಳಲಿದೆ. ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲು ಮಹಾರಾಷ್ಟ್ರ ಸರ್ಕಾರ ಒಪ್ಪಿದೆ. ಈ ಯೋಜನೆಯಡಿ ಕರ್ನಾಟಕಕ್ಕೆ 4 ಟಿಎಂಸಿ ಅಡಿ ನೀರು ಲಭ್ಯವಾಗಲಿದೆ. | ಬಸವರಾಜ ಬೊಮ್ಮಾಯಿ ಗೃಹ ಸಚಿವ