ಮಹಾರಾಣಿ ಲಕ್ಷ್ಮಮ್ಮಣಿ ನಮಗೆಲ್ಲ ಮಾರ್ಗದರ್ಶಕರು: ರಾಜವಂಶಸ್ಥೆ ಕಾಮಾಕ್ಷಿ ದೇವಿ ಒಡೆಯರ್ ಬಣ್ಣನೆ

1
Published on

ಮೈಸೂರು: ಕಷ್ಟದ ಸಮಯದಲ್ಲಿ ಆತ್ಮವಿಶ್ವಾಸ ಕಳೆದುಕೊಳ್ಳದೆ ತಾಳ್ಮೆಯಿಂದ ಇದ್ದರೆ ಮುಂದೆ ಜಯ ದೊರೆಯುತ್ತದೆ ಎನ್ನುವುದಕ್ಕೆ ಮಹಾರಾಣಿ ಲಕ್ಷ್ಮಮ್ಮಣ್ಣಿ ನಿದರ್ಶನ ಎಂದು ರಾಜವಂಶಸ್ಥೆ ಕಾಮಾಕ್ಷಿ ದೇವಿ ಒಡೆಯರ್ ಬಣ್ಣಿಸಿದರು.

ಅರಸು ಮಹಿಳಾ ಜಾಗೃತಿ ಸಭಾ ಟ್ರಸ್ಟ್‌ನಿಂದ ನಗರದ ರೋಟರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ 3ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ, ಪ್ರತಿಭಾ ಪುರಸ್ಕಾರ ಹಾಗೂ ಲಕ್ಷ್ಮಮ್ಮಣಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಷ್ಟದ ಸಂದರ್ಭವನ್ನು ಆತ್ಮವಿಶ್ವಾಸದಿಂದ ಹೇಗೆ ಎದುರಿಸಬೇಕು ಎಂಬುದಕ್ಕೆ ಮಹಾರಾಣಿ ಲಕ್ಷ್ಮಮ್ಮಣಿ ನಮಗೆಲ್ಲ ಮಾರ್ಗದರ್ಶಕರು. ಅವರನ್ನು ಟಿಪ್ಪು ಸೆರೆಮನೆಯಲ್ಲಿ ಇರಿಸಿದ್ದರೂ ಧೃತಿಗೆಡದೆ ಕಷ್ಟಗಳನ್ನು ಹೆದರಿಸಿ ರಾಜ್ಯವನ್ನು ಉಳಿಸಿಕೊಂಡರು. ಅವರ ಈ ಆತ್ಮವಿಶ್ವಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರು.

ಲಕ್ಷ್ಮಮ್ಮಣಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಸಂತಸದ ಸಂಗತಿ. ಬಡ ಮಹಿಳೆಯರ ಜೀವನಕ್ಕೆ ದಾರಿ ತೋರುವ ಕೆಲಸವನ್ನು ಅರಸು ಮಹಿಳಾ ಜಾಗೃತಿ ಸಭಾ ಟ್ರಸ್ಟ್‌ನ ಮಾಡುತ್ತಿದ್ದು, ಮಹಿಳಾ ಹಾಸ್ಟಲ್ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ. ಇವರ ಸೇವೆ ಮುಂದುವರಿಯಲಿ ಎಂದು ಆಶಿಸಿದರು.

ವಾಣಿಜ್ಯೋದ್ಯಮಿ ಇಂದ್ರಮ್ಮಣ್ಣಿ ಅರಸ್, ಸಂಗೀತ ಕ್ಷೇತ್ರದ ಎಸ್.ಅನ್ನಪೂರ್ಣದೇವಿ, ವೈದ್ಯಕೀಯ ಕ್ಷೇತ್ರದಿಂದ ಡಾ.ವಿಜಯಲಕ್ಷ್ಮೀ ಅರಸ್, ಸಮಾಜ ಸೇವೆಗಾಗಿ ಸುನಂದ ಬಗ್ಲೇರ್ ಹಾಗೂ ಕಲಾ ವಿಭಾಗದ ಸಾಧನೆ ಗುರುತಿಸಿ ಪೂರ್ಣಿಮಾ ಕೃಷ್ಣ ಅರಸ್ ಅವರಿಗೆ ಲಕ್ಷ್ಮಮ್ಮಣಿ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರೀತಮ್ ಅರಸ್, ಎ.ಬಿಂದು, ಖುಷಿ ಪಿ.ಅರಸ್, ಲಾವಣ್ಯ ಅರಸ್, ಪುಣ್ಯ ಅರಸ್, ಸಿಂಚನಾ ಅರಸ್, ಎಸ್.ಅಕ್ಷತಾ, ಪರಿಣಿತಾ ಅರಸ್, ತರುಣ್ ಅರಸ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಜಿ.ಆರ್.ಅರಸ್, ಜೆ.ಟಿ. ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ಸ್ಟಡೀಸ್‌ನ ಸಹಾಯಕ ಪ್ರಾಧ್ಯಾಪಕ ಸತ್ಯಪ್ರಕಾಶ್ ಅರಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ನಿವೃತ್ತ ಪ್ರಾಧ್ಯಾಪಕಿ ಡಾ.ಎಂ.ಸುಶೀಲಾ ಅರಸ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net