ಹಿಂದು ಧರ್ಮ ಕಾಪಾಡಿದ್ದ ಮಹಾರಾಣಾ ಪ್ರತಾಪಸಿಂಹ

h22-Rana Pratap 2
Published on

ಹುಬ್ಬಳ್ಳಿ: ಹಿಂದು ಧರ್ಮ ಕಾಪಾಡಿದ್ದವರಲ್ಲಿ ಮಹಾರಾಣಾ ಪ್ರತಾಪ ಸಿಂಹ ಅವರ ಕೊಡುಗೆ ಅಪಾರವಿದೆ ಎಂದು ಸ್ವರ್ಣ ಗ್ರುಪ್ ಆಫ್ ಕಂಪನೀಸ್ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ ಹೇಳಿದರು.

ನಗರದ ಹಳೇ ಕೋರ್ಟ್ ವೃತ್ತದ ಬಳಿ ರಾಷ್ಟ್ರವೀರ ಶ್ರೀ ಮಹಾರಾಣಾ ಪ್ರತಾಪಸಿಂಹರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ, ಅವರು ಮಾತನಾಡಿದರು.

ಭಾರತವು ಹಿಂದು ದೇಶವೆಂದು ಹೇಳಲು ಭದ್ರ ಬುನಾದಿ ಹಾಕಿದ ಮಹಾರಾಣಾರನ್ನು ಸ್ಮರಿಸುವುದು ನಮ್ಮ ಧರ್ಮ ಮತ್ತು ಕರ್ತವ್ಯ. ಇಂಥವರಿಂದಲೇ ನಮ್ಮ ದೇಶದ ಸಂಸ್ಕೃತಿ, ಧರ್ಮ ಉಳಿದಿದೆ. ನಾವೆಲ್ಲರೂ ಹಿಂದು ಧರ್ಮ ರಕ್ಷಣೆಗಾಗಿ ಹೋರಾಡಬೇಕಿದೆ. ನಮ್ಮ ಸಂಸ್ಕೃತಿ ಎತ್ತಿ ಹಿಡಿಯುವ ಕಾರ್ಯ ಮಾಡಬೇಕಿದೆ. ಹೀಗಾದಾಗ ಮಾತ್ರ ನಮ್ಮ ದೇಶ ವಿಶ್ವಗುರು ಆಗುವುದರಲ್ಲಿ ಸಂದೇಹವಿಲ್ಲ ಎಂದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಸುಭಾಷಸಿಂಗ್ ಜಮಾದಾರ ಮಾತನಾಡಿ, ದೇಶದ ಇತಿಹಾಸವನ್ನು ನೋಡಿದರೆ ಯಾವ ವಿಚಾರಗಳನ್ನು ಜನರಿಗೆ ನೀಡಬೇಕೋ ಅದನ್ನು ನೀಡಲಿಲ್ಲ. ಬ್ರಿಟೀಷರು ತಮಗೆ ಬೇಕಾದಹಾಗೆ ಇತಿಹಾಸ ತಿರುಚಿದ್ದಾರೆ. ಮೊಗಲ ಅರಸು ಅಕ್ಬರ್ ಅವರನ್ನು ಸೋಲಿಸಿದ ಕೀರ್ತಿ ಮಹಾರಾಣರಿಗೆ ಸಲ್ಲುತ್ತದೆ. ಇದು ಸಂಶೋಧನೆಯಿಂದ ದೃಢವಾಗುತ್ತಿದೆ. ಇಂಥವರ ಇತಿಹಾಸ ಓದುವ ಮೂಲಕ ಸದೃಢ ರಾಷ್ಟ್ರ ನಿರ್ವಣಕ್ಕೆ ಮುಂದಾಗಬೇಕಿದೆ ಎಂದು ಹೇಳಿದರು.

ರಜಪೂತ ಸಮಾಜದ ಅಧ್ಯಕ್ಷ ಉಮೇಶ ಸಿಂಗ್ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಪರ್ಬತಸಿಂಗ್ ಬಿಚಿ, ಶೋಭಾಭಾಯಿ ಕಿಲ್ಲೇದಾರ, ಸುರಜೀತಸಿಂಗ್ ಠಾಕೂರ, ರಜತ್​ಸಿಂಗ್ ಹಜಾರೆ, ಇತರರು ಇದ್ದರು.

ಪುತ್ಥಳಿಗೆ ಮಾಲಾರ್ಪಣೆ: ಮಹಾರಾಣಾ ಪ್ರತಾಪಸಿಂಹರ ಪುತ್ಥಳಿಗೆ ಡಾ.ವಿ.ಎಸ್.ವಿ. ಪ್ರಸಾದ ಸೇರಿದಂತೆ ಪ್ರಮುಖರು ಮಾಲಾರ್ಪಣೆ ಮಾಡಿದರು. ನಂತರ ನಗರದಾದ್ಯಂತ ಭವ್ಯ ಮೆರವಣಿಗೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net