

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ನಾಲ್ಕನೇ ಆವೃತ್ತಿಯ ಮಹಾರಾಜ ಟ್ರೋಫಿ ಟ್ವೆಂಟಿ 20 ಕ್ರಿಕೆಟ್ ಟೂರ್ನಿಯನ್ನು ಹುಬ್ಬಳ್ಳಿಯಲ್ಲಿ ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ತೀರ್ಮಾನ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಆಗ್ರಹಿಸಿದ್ದಾರೆ.
ಈ ಬಾರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹಾರಾಜ ಟ್ರೋಫಿ ಟ್ವೆಂಟಿ 20 ಕ್ರಿಕೆಟ್ ಟೂರ್ನಿಯನ್ನು ನಡೆಸಲು ಸರ್ಕಾರದಿಂದ ಅನುಮತಿ ಸಿಗದ ಕಾರಣ ಟೂರ್ನಿಯನ್ನೇ ಬೇರೆಡೆಗೆ ಸ್ಥಳಾಂತರಿಸಲು ಕೆಎಸ್ಸಿಎ ನಿರ್ಧರಿಸಿದೆ. ಹೀಗಿರುವಾಗ ಹುಬ್ಬಳ್ಳಿಯಲ್ಲಿ ನಡೆಸುವುದು ಸೂಕ್ತ ಎಂದು ಹೇಳಿದ್ದಾರೆ.
ಕೋಟಿ ಗಟ್ಟಲೇ ಹಣ ಖರ್ಚು ಮಾಡಿ ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ವಿುಸಲಾಗಿದೆ. ಆದರೆ, ಇಲ್ಲಿ ಯಾವುದೇ ಕ್ರಿಕೆಟ್ ಟೂರ್ನಿಗಳನ್ನು ಕೆಎಸ್ಸಿಎ ನಡೆಸುತ್ತಿಲ್ಲ. ಉಪಯೋಗವಾಗದೇ ಖಾಲಿ ಬಿದ್ದಿದೆ. ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಸ್ಟೇಡಿಯಂ ಬಳಕೆಯಾಗಬೇಕು. ಇಲ್ಲವಾದಲ್ಲಿ ರಾಜ್ಯ ಸರ್ಕಾರ ಈ ಜಾಗವನ್ನು ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.