

ಮೈಸೂರು: ಎರಡು ವರ್ಷಗಳ ಬಳಿಕ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮೈಸೂರಿನಲ್ಲಿ ‘ಟಿ-20’ ಪಂದ್ಯಾವಳಿ ಆಯೋಜಿಸಲು ಮುಂದಾಗಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಈ ಬಾರಿ ‘ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)’ ಹೆಸರಿನ ಬದಲಾಗಿ ಅದೇ ಮಾದರಿಯಲ್ಲಿ ‘ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿ’ ಆಯೋಜಿಸಲಾಗುತ್ತಿದೆ. ಆ. 7ರಿಂದ 26ರ ವರೆಗೆ ಮೈಸೂರು ಹಾಗೂ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ.
ಪ್ರತಿಷ್ಠಿತ ಮಹಾರಾಜ ಟ್ರೋಫಿಗೆ ಕ್ಷಣಗಣನೆ ಆರಂಭವಾಗಿರುವಂತೆ ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದ ರಂಗಿನ ವೇದಿಕೆಯಲ್ಲಿ ‘ಟ್ರೋಫಿ’ ಅನಾವರಣ ಮಾಡಲಾಯಿತು. ಜತೆಗೆ, ಪ್ರಶಸ್ತಿಗಾಗಿ ಹೋರಾಡುವ 6 ತಂಡಗಳ ನಾಯಕರನ್ನು ಪ್ರಕಟಿಸಲಾಯಿತು. ನಟ ಕಿಚ್ಚ ಸುದೀಪ್ ಟೂರ್ನಿಯ ರಾಯಭಾರಿಯಾಗಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಕ್ಕೆ ಸಾಕ್ಷಿಯಾದರು.
ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು ಹಾಗೂ ಮಂಗಳೂರಿನ ಹೆಸರಿನಲ್ಲಿ 6 ತಂಡಗಳು ಸ್ಪರ್ಧಿಸುತ್ತಿವೆ. ಆ. 7ರಂದು ಮೈಸೂರಿನ ಮಾನಸಗಂಗೋತ್ರಿಯ ಗ್ಲೇಡ್ಸ್ ಮೈದಾನದಲ್ಲಿ ಟೂರ್ನಿಗೆ ಚಾಲನೆ ಸಿಗಲಿದ್ದು, ಒಟ್ಟು 18 ಪಂದ್ಯಗಳು ಮೊದಲ ಚರಣದಲ್ಲಿ ನಡೆಯಲಿವೆ. ಬಳಿಕ ೈನಲ್ ಸೇರಿದಂತೆ ಉಳಿದ 16 ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿವೆ.
ಕೆಎಸ್‌ಸಿಎ ಅಧ್ಯಕ್ಷ ರೋಜರ್ ಬಿನ್ನಿ ಮಾತನಾಡಿ, ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಮಾದರಿಯಲ್ಲಿ ಟೂರ್ನಿ ನಡೆಯುತ್ತಿದ್ದು, ್ರಾಂಚೈಸಿಗಳ ಬದಲಿಗೆ ಪ್ರಾಯೋಜಕತ್ವದಡಿ ಟೂರ್ನಿ ಆಯೋಜಿಸಲಾಗುತ್ತಿದೆ.
ನಟ ಕಿಚ್ಚ ಸುದೀಪ್ ಅವರಿಗೆ ನಾನು ಚಿರಋಣಿ. ನೈಜ ಕ್ರೀಡಾಪ್ರೇಮಿಯಾಗಿದ್ದು, ಸ್ವತಃ ಕ್ರಿಕೆಟ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸುದೀಪ್ ಅವರು ಟೂರ್ನಿಯ ರಾಯಭಾರಿ ಎಂದು ಘೋಷಿಸಲು ನನಗೆ ಹೆಮ್ಮೆಯಾಗುತ್ತಿದೆ ಎಂದರು.
ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕರಾಗಿ ಮಯಾಂಕ್ ಅಗರ್ವಾಲ್ ಅವರು ಜವಾಬ್ದಾರಿ ವಹಿಸಲಿದ್ದಾರೆ. ಇದಕ್ಕೂ ಮನ್ನ ಈ ವರ್ಷದ ಆರಂಭದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಯಾಂಕ್ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದರು. ಗುಲ್ಬರ್ಗ ಮೈಸ್ಟಿಕ್ ತಂಡದ ನಾಯಕನ ಜವಾಬ್ದಾರಿಯನ್ನು ಮನೀಶ್ ಪಾಂಡೆ ಅವರಿಗೆ ನೀಡಲಾಗಿದೆ. ಮೈಸೂರು ವಾರಿಯರ್ಸ್ ತಂಡವನ್ನು ಕರುಣ್ ನಾಯರ್ ಮುನ್ನಡೆಸಲಿದ್ದಾರೆ. ಅನುಭವಿ ಬೌಲರ್ ಕೆ.ಗೌತಮ್ ಶಿವಮೊಗ್ಗ ಸ್ಟ್ರೈಕರ್ಸ್ ತಂಡದ ಹಾಗೂ ಆರ್.ಸಮರ್ಥ್ ಮಂಗಳೂರು ಯುನೈಟೆಡ್ ತಂಡದ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ವೇಗದ ಬೌಲರ್ ಅಭಿಮನ್ಯು ಮಿಥುನ್ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಘೋಷಿಸಿದರು.
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಪಂದ್ಯಾವಳಿಗೆ ಚಾಲನೆ ನೀಡಿಲಿದ್ದಾರೆ. ಆ. 7ರಂದು ಮಧ್ಯಾಹ್ನ 3ಗಂಟೆಗೆ ಮೈಸೂರಿನಲ್ಲಿ ಮಂಗಳೂರು ಯುನೈಟೆಡ್ ಮತ್ತು ಹುಬ್ಬಳ್ಳಿ ಟೈಗರ್ಸ್ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ. ಮೊದಲ ದಿನದ ಎರಡನೇ ಪಂದ್ಯದಲ್ಲಿ ಕರುಣ್ ನಾಯರ್ ನಾಯಕತ್ವದ ಮೈಸೂರು ವಾರಿಯರ್ಸ್ ತಂಡ ಕೆ. ಗೌತಮ್ ನಾಯಕತ್ವದ ಶಿವಮೊಗ್ಗ ಸ್ಟ್ರೈಕರ್ಸ್ ವಿರುದ್ಧ ಸೆಣಸಲಿದೆ ಎಂದರು.
ಕೆಎಸ್‌ಸಿಎ ಖಜಾಂಚಿ ವಿನಯ್ ಮೃತ್ಯುಂಜಯ ಮಾತನಾಡಿ, ಮಹಾರಾಜ ಟ್ರೋಫಿ ಟಿ-20 ಟೂರ್ನಿಯ ಟೈಟಲ್ ಪ್ರಾಯೋಜಕತ್ವವನ್ನು ಶ್ರೀರಾಮ್ ಗ್ರೂಪ್ ವಹಿಸಲಿದೆ. ಈ ಋತು ಸೇರಿದಂತೆ ಒಟ್ಟು ಮೂರು ಋತುಗಳಿಗೆ ಶ್ರೀರಾಮ್ ಗ್ರೂಪ್ ಟೈಟಲ್ ಪ್ರಾಯೋಜಕತ್ವ ವಹಿಸಲಿದೆ. ಮೂರು ವಾರಗಳ ಪರ್ಯಂತ ನಡೆಯುವ ಟಿ-20 ಕ್ರಿಕೆಟ್ ಹಬ್ಬದ ಪ್ರಾಯೋಜಕತ್ವದಲ್ಲಿ ಸ್ಟಾರ್ ಸ್ಪೋರ್ಟ್ಸ್ 2 ಮತ್ತು ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲಿ ನೇರ ಪ್ರಸಾರವಾಗಲಿದೆ. ಹೆಚ್ಚಿನ ಪ್ರಮಾಣದ ಬಳಕೆಗಾಗಿ ಫ್ಯಾನ್‌ಕೋಡ್ ಆ್ಯಪ್‌ನಲ್ಲಿಯೂ ವೀಕ್ಷಿಸಬಹುದು ಎಂದರು.
ಕೆಎಸ್‌ಸಿಎ ಮೈಸೂರು ವಲಯ ಸಂಚಾಲಕ ಎಸ್.ಸುಧಾಕರ್ ರೈ, ಸದಸ್ಯ ಇರ್ಫಾನ್ ಸೇಠ್, ಮೈಸೂರು ವಾರಿಯರ್ಸ್ ತಂಡದ ಮಾಲೀಕ ಪವನ್ ರಂಗ, ತಂಡದ ನಾಯಕ ಕರುಣ್ ನಾಯರ್ ಇದ್ದರು.
ಸ್ಟಾರ್ ಆಟಗಾರರು ಭಾಗಿ
ಕರ್ನಾಟಕ ಸ್ಟಾರ್ ಆಟಗಾರರಾದ ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ, ಜೆ.ಸುಚಿತ್, ದೇವದತ್ ಪಡಿಕಲ್, ಶ್ರೇಯಸ್ ಗೋಪಾಲ್, ಕೆ.ಗೌತಮ್, ಕರುಣ್ ನಾಯರ್, ಅಭಿನವ್ ಮನೋಹರ್, ಕೆ.ಸಿ.ಕಾರ್ಯಪ್ಪ, ಪ್ರವೀಣ್ ದುಬೆ ಹಾಗೂ ಅಭಿಮನ್ಯು ಮಿಥುನ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.