

ಮೈಸೂರು: ಬೆಂಗಳೂರು ಮತ್ತು ಮೈಸೂರಿನಲ್ಲಿ ಆ.7 ರಿಂದ 26 ರವರೆಗೆ ನಡೆಯಲಿರುವ ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಪಂದ್ಯಾವಳಿಗೆ ಎನ್‌ಆರ್ ಗ್ರೂಪ್ ಸೈಕಲ್ ಪ್ಯೂರ್ ಅಗರಬತ್ತಿ ಸಂಸ್ಥೆ ಒಡೆತನದ ‘ಮೈಸೂರು ವಾರಿಯರ್ಸ್’ ತಂಡವನ್ನು ಶುಕ್ರವಾರ ನಗರದ ಖಾಸಗಿ ಹೋಟೆಲ್‌ವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಕಟಿಸಲಾಯಿತು.
ಅಂತಾರಾಷ್ಟ್ರೀಯ ಕ್ರಿಕೆಟ್ ಪಟು ಕರುಣ್ ನಾಯರ್ ‘ಮೈಸೂರು ವಾರಿಯರ್ಸ್’ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಶ್ರೇಯಸ್ ಗೋಪಾಲ್, ಪವನ್ ದೇಶ್‌ಪಾಂಡೆ, ವಿದ್ಯಾಧರ್ ಪಾಟೀಲ್, ನಿಹಾಲ್ ಉಲ್ಲಾಳ್, ಪ್ರತೀಕ್ ಜೈನ್, ಭರತ್ ಧುರೈ, ಚಿರಂಜೀವಿ, ಶುಬಾಂಗ್ ಹೆಗ್ಡೆ, ಲೋಚನ್ ಅಪ್ಪಣ್ಣ, ಶಿವರಾಜ್, ಮೋನಿಷ್ ರೆಡ್ಡಿ, ವರುಣ್ ರಾವ್, ರಾಹುಲ್ ಪ್ರಸನ್ನ, ನಿತಿನ್ ಬಿಲ್ಲೆ, ಆದಿತ್ಯ ಗೋಯಲ್, ಅಭಿಷೇಕ್ ಅಲಾವತ್, ನಾಗ ಭರತ್, ಕೆ. ಅರುಣ್, ಎಚ್. ತುಷಾರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ತಂಡದ ಮುಖ್ಯ ತರಬೇತುದಾರರಾಗಿ ಪಿ.ವಿ. ಶಶಿಕಾಂತ್, ಸಹಾಯಕ ತರಬೇತುದಾರರಾಗಿ ಕೆ.ಎಲ್. ಅಕ್ಷಯ್, ಫಿಜಿಯೋಥೆರಪಿಸ್ಟ್‌ಆಗಿ ಟಿ. ಮಂಜುನಾಥ್, ಟ್ರೇನರ್‌ಆಗಿ ಇರ್ಫಾನ್ ಉಲ್ಲಾ ಖಾನ್ ಮತ್ತು ವಿಡಿಯೋ ವಿಶ್ಲೇಷಕರಾಗಿ ಕೆ. ಕಿರಣ್ ಕಾರ್ಯ ನಿರ್ವಹಿಸಲಿದ್ದಾರೆ. ಕೆ.ಎಲ್. ಅಶ್ವತ್ ತಂಡದ ಆಯ್ಕೆದಾರರಾಗಿ ಕಾರ್ಯನಿರ್ವಹಿಸಿದ್ದಾರೆ.
''ಮೈಸೂರು ವಾರಿಯರ್ಸ್ ತಂಡ ಸಕ್ಕತ್ತಾಗಿದ್ದು, ತಂಡವನ್ನು ಉತ್ತಮವಾಗಿ ಕಟ್ಟಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿದ ಅನುಭವ ನಮ್ಮ ತಂಡದ ಗೆಲುವಿಗೆ ಸಹಕಾರಿಯಾಗಲಿದೆ. ನನ್ನ ಅನುಭವವನ್ನು ಸಹ ಆಟಗಾರರೊಂದಿಗೆ ಹಂಚಿಕೊಂಡು ತಂಡದ ಗೆಲುವಿಗೆ ಶ್ರಮಿಸುತ್ತೇನೆ. ನಮ್ಮದು ಆಲ್‌ರೌಂಡರ್ ಟೀಮ್, ಇದು ನಮ್ಮ ತಂಡದ ಶಕ್ತಿಯಾಗಿದೆ'' ಎನ್ನುತ್ತಾರೆ ತಂಡದ ನಾಯಕ ಕರುಣ್ ನಾಯರ್.