

ಮುರಗೋಡ: ಗ್ರಾಮದ ಮಹಾಂತ ದುರದುಂಡೇಶ್ವರ ಮಠದಲ್ಲಿ ಮಾ.3 ರಿಂದ 10ರ ವರೆಗೆ ಲಿಂ.ಮಹಾಂತ ಶಿವಯೋಗಿಗಳ 53ನೇ ಪುಣ್ಯಸ್ಮರಣೋತ್ಸವ ಹಾಗೂ ತ್ರಿಶಂಗಪೂರ ಉತ್ಸವ ಜರುಗಲಿದೆ.
ಮಾ.3ರಿಂದ 7ರ ವರೆಗೆ ದುಮ್ಮವಾಡದ ಶ್ರೀ ಸರ್ಪಭೊಷಣ ದೇವರು ಪ್ರತಿದಿನ ಸಂಜೆ 7 ಗಂಟೆಗೆ ಪ್ರವಚನ ನೀಡುವರು. ಮಾ.5 ರಂದು ಹುಬ್ಬಳ್ಳಿಯ ಎಂ.ಎಂ.ಜ್ಯೋಶಿ ನೇತ್ರ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಉಚಿತ ಶಿಬಿರ ಏರ್ಪಡಿಸಲಾಗಿದೆ.
ಮಾ.8ರಂದು ಬೈಲಹೊಂಗಲ ಮೂರುಸಾವಿರ ಮಠದ ಶ್ರೀ ಪ್ರಭುನೀಲಕಮಠ ಸ್ವಾಮೀಜಿ ಷಟಸ್ಥಲ ಧ್ವಜಾರೋಹಣ ನೆರವೇರಿಸುವರು. ಮಾ.9ರಂದು ತ್ರಿಶಂಗಪೂರ ಉತ್ಸವ, ಗುರುವಂದನೆ, ಪಾಠಶಾಲೆ ಹಳೆ ವಿದ್ಯಾರ್ಥಿಗಳ ಸಮಾವೇಶ ಹಾಗೂ ಮುರಗೋಡ ಮುಕುಟ ಪ್ರಶಸ್ತಿ ಪ್ರದಾನ ನಡೆಯಲಿದೆ.
ಮಾ.10ರಂದು ಮಹಾಂತ ಶಿವಯೋಗಿಗಳ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ, ಮಧ್ಯಾಹ್ನ 12ಕ್ಕೆ ಸಾಮೂಹಿಕ ವಿವಾಹ, ನಂದಿಕೋಲು ಉತ್ಸವ, ಬೃಹತ್ ರುದ್ರಾ ಮಾಲೆ ಮೆರವಣಿಗೆ, ಮಹಾಂತ ಶಿವಯೋಗಿಗಳ ಬೆಳ್ಳಿ ಮೂರ್ತಿ, ಬಂಗಾರದ ಪಾದುಕೆ ಪೂಜೆ ಜರುಗಲಿದೆ. ಸಂಜೆ ಮಹಾರಥೋತ್ಸವ ಹಾಗೂ ಪುಣ್ಯ ಸ್ಮರಣೋತ್ಸವ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.