ಸಮಾಜವನ್ನು ವ್ಯಸನಮುಕ್ತ ಮಾಡುವಲ್ಲಿ ಡಾ.ಮಹಾಂತ ಶಿವಯೋಗಿಗಳ ಕೊಡುಗೆ ಅಪಾರ

IMG-20230801-WA0087 (1)
Published on

ಗದಗ: ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ದಲ್ಲಿ  ಮಂಗಳವಾರದAದು  ಗದಗ ಜಿಲ್ಲಾಡಳಿತ, ಜಿ.ಪಂ. ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ವ್ಯಸನಮುಕ್ತ ದಿನಾಚರಣೆಯನ್ನು  ಹಮ್ಮಿಕೊಳ್ಳಲಾಯಿತು.

ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಡಾ. ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪ  ನಮನ ಸಲ್ಲಿಸಿ  ವ್ಯಸನ ಮುಕ್ತತೆ ಕುರಿತು ಪ್ರತಿಜ್ಞಾ  ವಿಧಿ ಬೋಧಿಸಿದರು. ಯುವಜನರು ಸಮಾಜದ ಸ್ವಾಸ್ಥö್ಯ ಕಾಪಾಡಬೇಕು. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗುವ ಮೂಲಕ ಆರೋಗ್ಯಯುತ ಜೀವನ ನಿಮ್ಮದಾಗಿಸಿಕೊಳ್ಳಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ತಜ್ಞರಾದ ಡಾ. ರಾಘವೇಂದ್ರ ಪಾಟೀಲ ಅವರು ಉಪನ್ಯಾಸ ನೀಡುತ್ತಾ ಮಾತನಾಡಿ ಸಮಾಜವನ್ನು ದುಶ್ಚಟಗಳ ವ್ಯಸನಮುಕ್ತವಾಗಿಸುವಲ್ಲಿ ಮಹಾಂತ ಶಿವಯೋಗಿಗಳ ಕೊಡುಗೆ ಅಪಾರವಾಗಿದೆ. ಅವರು ಜೋಳಿಗೆ ಹಿಡಿದುಕೊಂಡು ಬಿಕ್ಷೆ ಬೇಡುತ್ತಿದ್ದರು. ಕೆಟ್ಟ ಹವ್ಯಾಸ, ಕೆಟ್ಟ ಚಟಗಳನ್ನು ಜೋಳಿಗೆಯಲ್ಲಿ ಹಾಕಿ ನಂತರ ಅವುಗಳನ್ನು ತ್ಯಜಿಸಬೇಕೆಂದು ಸಾರ್ವಜನಿಕರಿಗೆ ತಿಳುವಳಿಕೆ ನೀಡುತ್ತಾ ಬಹಳ ಶ್ರಮಿಸಿದ್ದಾರೆ. ರಾಜ್ಯ ಸರ್ಕಾರ ಪ್ರತಿ ವರ್ಷ ಅಗಸ್ಟ 1 ರಂದು ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಆಚರಿಸುವ ಮೂಲಕ ಜನರಲ್ಲಿ ಜಾಗೃತಿಗೆ ಮುಂದಾಗಿದೆ.

ಇಂದಿನ ಯುವಶಕ್ತಿ ದುಶ್ಚಟಗಳ ವ್ಯಸನಕ್ಕೆ ಒಳಗಾಗಿ ಸಾಮಾಜಿಕ ಜವಾಬ್ದಾರಿ ಪೂರೈಸುವಲ್ಲಿ ವಿಫಲರಾಗುತ್ತಿದ್ದಾರೆ. ತಂಬಾಕು, ಅಲ್ಕೋಹಾಲ್, ಹೆರಾಯಿನ್, ಗಾಂಜಾ, ಅಫೀಮು, ಚರಸ್ ಮುಂತಾದ ಮಾದಕ ವಸ್ತುಗಳ ಸೇವನೆಯು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ದುಷ್ಪರಿಣಾಮಕ್ಕೆ ಕಾರಣವಾಗುತ್ತದೆ. ಇದರ ಅತಿಯಾದ ಸೇವನೆಯಿಂದ ಅಥವಾ ಬಳಕೆಯಿಂದ ವ್ಯಕ್ತಿಯು ವ್ಯಸನಕ್ಕೆ ಒಳಗಾಗಿ ತನ್ನ ದೈನಂದಿನ ಕರ್ತವ್ಯಗಳನ್ನು ಮರೆತು ಕಳ್ಳತನ, ಮೋಸ, ವಂಚನೆಗಳನ್ನು ಮಾಡಿ ಮಾದಕ ವಸ್ತುಗಳ ದಾಸನಾಗುತ್ತಾನೆ. ಇದರಿಂದ ವ್ಯಕ್ತಿಯ ಮೆದುಳಿನ ಸವಕಳಿ, ನರದೌರ್ಬಲ್ಯ ಉಂಟಾಗುತ್ತದೆ. ದೂಮಪಾನ ಮಾಡುವುದರಿಂದ ವ್ಯಕ್ತಿಯ ಸುತ್ತಮುತ್ತಲನವರಿಗೂ ಸಹ ದೈಹಿಕ ದುಷ್ಪರಿಣಾಮ ಉಂಟಾಗುತ್ತದೆ. ಪಾಲಕರು ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾದರೆ ಮಕ್ಕಳೂ ಸಹ ವ್ಯಸನಕ್ಕೆ ಒಳಗಾಗುವ ಸಾಧ್ಯತೆಗಳಿರುತ್ತವೆ ಹಾಗೂ ವ್ಯಕ್ತಿಗಳು ಹಲವಾರು ತಪ್ಪು ತಿಳುವಳಿಕೆಯಿಂದ ಮಾದಕ ವಸ್ತುಗಳ ವ್ಯಸನಿಗಳಾಗುತ್ತಾರೆ.  
ನಮ್ಮ ದೇಶದಲ್ಲಿ 26 ಕೋಟಿ ಜನ ತಂಬಾಕು ಸೇವನೆ ಮಾಡುತ್ತಿದ್ದಾರೆ.  16 ಕೋಟಿ ಜನ ಮದ್ಯವ್ಯಸನಿಯಾಗಿದ್ದಾರೆ.  3 ಕೋಟಿ ಜನ ಗಾಂಜಾ ಉಪಯೋಗಿಸುತ್ತಿದ್ದಾರೆ. 51 ಲಕ್ಷ ಜನರು ಮಾದಕ ದ್ರವ್ಯ ವಸ್ತು  ಉಪಯೋಗಿಸುತ್ತಿದ್ದಾರೆ. ಆ ಪೈಕಿ 26 ಲಕ್ಷ ಜನ ಮಕ್ಕಳು ವ್ಯಸನಕ್ಕೆ ಒಳಗಾಗಿದ್ದಾರೆ. ತಂಬಾಕು ಸೇವನೆಯಿಂದ ಶೇಕಡ 90 ರಷ್ಟು ಕ್ಯಾನ್ಸರ್ ಬರುವ ಸಂಭವವಿರುತ್ತದೆ. ವ್ಯಸನಿಗಳ ಚಿಕಿತ್ಸೆಗಾಗಿ  ಪ್ರತಿ ವರ್ಷ ದೇಶದಲ್ಲಿ 2 ಸಾವಿರ ಬಿಲಿಯನನ್ನಷ್ಟು ಖರ್ಚು ಮಾಡಲಾಗುತ್ತಿದೆ. ವಿಶ್ವದಲ್ಲಿನ ಮಾದಕ ವಸ್ತುಗಳ ವ್ಯಸನಿಗಳ ಪೈಕಿ ಶೇ 17 ರಷ್ಟು ಭಾರತದಲ್ಲಿದ್ದಾರೆ. ಮಾದಕ ವ್ಯಸನಿಗಳು ವೈದ್ಯರ ಸಲಹೆಯೊಂದಿಗೆ ಸೂಕ್ತ ಚಿಕಿತ್ಸೆ ಪಡೆದರೆ ವ್ಯಸನತೆಯಿಂದ ಹೊರಬರಬಹುದಾಗಿದೆ. ಭಾರತ ಸರ್ಕಾರದ ಟೆಲಿಮಾನಸ ಕಾರ್ಯಕ್ರಮದಲ್ಲಿ ಆನ್‌ಲೈನ್ ಮುಖಾಂತರ ಭಾಗವಹಿಸಿ ವ್ಯಸನ ಮುಕ್ತತೆಗಾಗಿ ವೈದ್ಯರ ಸಲಹೆಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.  

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗದೀಶ ನುಚ್ಚಿನ್, ಆರ್.ಸಿ.ಎಚ್. ಅಧಿಕಾರಿ ಡಾ.ಬಿ.ಎಂ.ಗೊಜನೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ. ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ ಶಿರಾಳಿ, ಡಿಡಿಪಿಐ ಜಿ.ಎಲ್.ಬಾರಾಟಕ್ಕೆ,ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಹುಲಗಣ್ಣವರ,  ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.  ಶಿವಾನಂದ ಗಿಡ್ನಂದಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net