

ದೊಡ್ಡಬಳ್ಳಾಪುರ: ನಗರದ ಸಮಗ್ರ ಅಭಿವೃದ್ಧಿಗೆ ಬುನಾದಿ ಹಾಕಿದವರು ಲೋಕಸೇವಾ ನಿರತ ಕಾಯಕ ಯೋಗಿ ಡಿ.ಕೊಂಗಾಡಿಯಪ್ಪ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಬಣ್ಣಿಸಿದರು.
ತಾಲೂಕು ಕಸಾಪದಿಂದ ಶನಿವಾರ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಡಿ.ಕೊಂಗಾಡಿಯಪ್ಪ ಅವರ 164ನೇ ಜಯಂತಿಯಲ್ಲಿ ಮಾತನಾಡಿದ ಅವರು, ದೊಡ್ಡಬಳ್ಳಾಪುರದ ಅಭಿವೃದ್ಧಿ ಪ್ರಧಾನವಾಗಿ ಚಿಂತಿಸುತ್ತಿದ್ದ ಸಂತ ಕೊಂಗಾಡಿಯಪ್ಪ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ತಮ್ಮ ಸೇವಾ ಮನೋಭಾವದಿಂದ ಸರ್ವಜನ ಮಾನ್ಯರಾಗಿದ್ದ ಅವರು ಮೈಸೂರು ಮಹಾರಾಜರಿಂದ ದೊಡ್ಡಬಳ್ಳಾಪುರಕ್ಕೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿದರು. ವಿದ್ಯುತ್, ಆಸ್ಪತ್ರೆ, ಸರ್ಕಾರಿ ಶಾಲೆ, ಕುಡಿವ ನೀರು, ಕೈಗಾರಿಕಾ ತರಬೇತಿ ಕೇಂದ್ರ ಮುಂತಾದವಗಳನ್ನು ಮೈಸೂರು ರಾಜರಿಂದ ಮಂಜೂರು ಮಾಡಿಸಿದ್ದರು. ಸೇವಾಮನೋಭಾವದಿಂದ ಜನಮನ್ನಣೆಯೊಂದಿಗೆ ಮೈಸೂರು ಮಹಾರಾಜರಿಂದ ‘ಲೋಕಸೇವಾ ನಿರತ ಎಂಬ ಬಿರುದಿಗೆ ಪುರಸ್ಕೃತರಾದರು ಎಂದು ಬಣ್ಣಿಸಿದರು.
ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಎ.ಜಯರಾಮ ಮಾತನಾಡಿ, ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಕೊಂಗಾಡಿಯಪ್ಪ ಅವರು ಎಲ್ಲ ವರ್ಗದ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದ್ದರು. ಅವರ ಮನೆ ವಿದ್ಯಾರ್ಥಿನಿಲಯದಂತಿತ್ತು. ವಯಸ್ಕರ ಶಿಕ್ಷಣ ಶಾಲೆ ಸಹ ನಡೆಸಿ ದೊಡ್ಡಬಳ್ಳಾಪುರದ ಸಾಕ್ಷರತೆಗೆ ಶ್ರಮಿಸಿದ್ದಾರೆ ಎಂದರು.
ಕಸಾಪ ಸಂಘಟನಾ ಕಾರ್ಯದರ್ಶಿ ಆರ್.ಗೋವಿಂದರಾಜು, ಸಾಸಲು ಘಟಕ ಅಧ್ಯಕ್ಷ ಜಿ.ಎಂ.ನಾಗರಾಜು, ಪ್ರತಿನಿಧಿಗಳಾದ ಷಪೀರ್, ಕೋದಂಡರಾಮ್, ಕಲಾವಿದ ದರ್ಗಾ ಜೋಗಿಹಳ್ಳಿ ಮಲ್ಲೇಶ್ ಇದ್ದರು.