ಮಹಾನಗರ ಪಾಲಿಕೆಗೆ 20 ಕೋಟಿ ರೂ. ಸಂಕಷ್ಟ!

corporation1
ಬೆಳಗಾವಿ ಮಹಾನಗರ ಪಾಲಿಕೆ
Published on

ಬೆಳಗಾವಿ: ನಗರದಲ್ಲಿನ ರಸ್ತೆ ಅಗಲೀಕರಣಕ್ಕೆ ಸ್ವಾಧೀನ ಪಡಿಸಿಕೊಂಡ ಭೂಮಿಗೆ 20 ಕೋಟಿ ರೂ. ಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸಿರುವ ಮಹಾನಗರ ಪಾಲಿಕೆಗೆ ಹೈಕೋರ್ಟ್ ಬಿಸಿ ತಟ್ಟಿದೆ.

ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಲಾದ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೇ ಪಿಬಿ ರಸ್ತೆಯ ವರೆಗಿನ ಮಾರ್ಗದ ಅಗಲೀಕರಣಕ್ಕೆ ಭೂಮಿಯನ್ನು ಪಾಲಿಕೆ ಸ್ವಾಧೀನ ಪಡಿಸಿಕೊಂಡಿತ್ತು. ಈ ಭೂಮಿಗೆ ನಿಯಾಮಾನುಸಾರ ಮಾಲೀಕರಿಗೆ ಪರಿಹಾರ ನೀಡುವಂತೆ 2021ರಲ್ಲೇ ಧಾರವಾಡ ಹೈಕೋರ್ಟ್ ಆದೇಶಿಸಿತ್ತು.

2023ರಲ್ಲಿಯೇ ಬೆಳಗಾವಿ ಉಪವಿಭಾಗಾಧಿಕಾರಿಗಳು ಆರು ತಿಂಗಳ ಒಳಗಾಗಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಅಫಿಡೆವಿಟ್ ಸಲ್ಲಿಸಿದ್ದರು. ಆದರೆ, ಇಲ್ಲಿಯವರೆಗೂ ಪೂರ್ಣಗೊಳ್ಳದಿರುವುದು, ಪರಿಹಾರ ಕುರಿತು ದೂರುದಾರರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಇದರಿಂದಾಗಿ ಪಾಲಿಕೆ ಅಧಿಕಾರಿಗಳು ನ್ಯಾಯಾಂಗ ನಿಂದನೆ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.

2021ರಲ್ಲೇ ಸ್ವಾಧೀನಪಡಿಸಿಕೊಂಡ ಆಸ್ತಿಗಳಿಗೆ 20 ಕೋಟಿ ರೂ. ಪರಿಹಾರ ನೀಡಲು ಅನುದಾನ ಕೊರತೆ ಉಂಟಾಗಿದ್ದು, ಸರ್ಕಾರ ಹಂತದಲ್ಲಿಯೇ ಬಿಡುಗಡೆ ಮಾಡಬೇಕು ಎಂದು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲಾಗಿತ್ತು. ಆದರೆ, ಸರ್ಕಾರ 2022ರಲ್ಲಿ ಪಾಲಿಕೆಯಿಂದಲೇ ಭೂ ಪರಿಹಾರ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿತ್ತು. ಇದರಿಂದಾಗಿ ಕಂಗೆಟ್ಟಿರುವ ಪಾಲಿಕೆಗೆ ಪರಿಹಾರ ಮೊತ್ತ ನೀಡಲು ಆರ್ಥಿಕ ಸಂಕಷ್ಟ ಎದುರಾಗಿದೆ. ಅಲ್ಲದೆ, ಈ ಕುರಿತು ಚರ್ಚಿಸಲು ಆ.27ರಂದು ತುರ್ತು ಪರಿಷತ್ ಸಭೆ ಕರೆದಿದೆ.

ಬೇಕಾಬಿಟ್ಟಿ ಖರ್ಚುವೆಚ್ಚ

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ವಾರ್ಷಿಕ ಕೋಟ್ಯಂತರ ರೂ. ಆದಾಯ ಬರುತ್ತಿದ್ದರೂ ಅಭಿವೃದ್ಧಿ, ಕಾರ್ಮಿಕರ ವೇತನ ಪಾವತಿಸಲು ಪರದಾಡುತ್ತಿದೆ. ಅಲ್ಲದೆ, ಅಧಿಕಾರಿಗಳು ನ್ಯಾಯಾಲಯದ ಹಂತದಲ್ಲಿರುವ ಪ್ರಕರಣಗಳನ್ನು ಮುಚ್ಚಿ ಹಾಕಿರುವ ಪರಿಣಾಮ ನ್ಯಾಯಾಂಗ ನಿಂದನೆಗೆ ತುತ್ತಾಗುವ ಪರಿಸ್ಥಿತಿ ಇದೆ. ಪಾಲಿಕೆಯಲ್ಲಿನ ಖರ್ಚು- ವೆಚ್ಚಗಳು ಲೆಕ್ಕಕ್ಕೆ ಸಿಗುತ್ತಿಲ್ಲ. ಅಧಿಕಾರಿಗಳು ಬೇಕಾಬಿಟ್ಟಿಯಾಗಿ ಹಣ ಖರ್ಚು ಮಾಡುತ್ತಿದ್ದಾರೆ. ಸದ್ಯ ಪಾಲಿಕೆಯ ಬ್ಯಾಂಕ್ ಖಾತೆಯಲ್ಲಿ ಸಿಬ್ಬಂದಿ ವೇತನಕ್ಕೆ ಕೇವಲ 40 ಕೋಟಿ ರೂ. ಮೀಸಲಿಡಲಾಗಿದೆ. ಪುರಸಭೆ, ಪಟ್ಟಣ ಪಂಚಾಯಿತಿ ಖಾತೆಗಳಲ್ಲಿ ಕನಿಷ್ಠ 30 ರಿಂದ 50 ಕೋಟಿ ರೂ. ವರೆಗೆ ಹಣ ಇದೆ. ಆದರೆ, ಮಹಾನಗರ ಪಾಲಿಕೆಯಲ್ಲಿ ಕಡಿಮೆ ಹಣ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಪಾಲಿಕೆ ಸದಸ್ಯರು ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net